ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿಗೆ ಐಪಿಎಲ್ 2026ರ ‘ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್’ ಪ್ರಶಸ್ತಿಯ ಅಂಗವಾಗಿ ಹೊಸ ಟಾಟಾ ಸಿಯೆರಾ ಎಸ್‌ಯುವಿ ಕಾರು ಬಹುಮಾನವಾಗಿ ಲಭಿಸಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಬಿಹಾರ ತಂಡದ ನಾಯಕರಾಗಿ ನೇಮಕವಾಗಿರುವ ಈ 15 ವರ್ಷದ ಆಟಗಾರನ ಸಾಧನೆಗಳು ಅಪಾರ.

ನವದೆಹಲಿ(ನ.09): ಭಾರತದ ಯುವ ಕ್ರಿಕೆಟ್‌ ಪ್ರತಿಭೆ ವೈಭವ್‌ ಸೂರ್ಯವಂಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿರುವ 15 ವರ್ಷದ ಈ ಆಟಗಾರನ ಕಾರುಗಳ ಸಂಗ್ರಹಕ್ಕೆ ಇದೀಗ ಮತ್ತೊಂದು ದುಬಾರಿ ವಾಹನ ಸೇರ್ಪಡೆಯಾಗಿದೆ. ಐಪಿಎಲ್‌ 2026ರಲ್ಲಿ ‘ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಸೀಸನ್‌’ ಪ್ರಶಸ್ತಿ ಗೆದ್ದಿದ್ದ ವೈಭವ್‌ಗೆ ಬಹುಮಾನವಾಗಿ ಹೊಸ ಟಾಟಾ ಸಿಯೆರಾ ಎಸ್‌ಯುವಿ ಲಭಿಸಿದೆ. ಇತ್ತೀಚೆಗಷ್ಟೇ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಬಿಹಾರ ತಂಡದ ನಾಯಕರಾಗಿ ನೇಮಕವಾಗಿರುವ ಬೆನ್ನಲ್ಲೇ ವೈಭವ್‌ಗೆ ಮತ್ತೊಂದು ಗಿಫ್ಟ್ ಸಿಕ್ಕಂತಾಗಿದೆ.

ಬಿಹಾರ ಮೂಲದ ವೈಭವ್‌ ಸೂರ್ಯವಂಶಿ 2025ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಸತತ ಉತ್ತಮ ಪ್ರದರ್ಶನದ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ವೇಗವಾಗಿ ಗುರುತಿಸಿಕೊಂಡರು. ಎರಡು ಯಶಸ್ವಿ ಐಪಿಎಲ್‌ ಋತುಗಳ ನಂತರ ಅವರಿಗೆ ಮೊದಲ ಬಾರಿಗೆ ಭಾರತ ತಂಡದಿಂದ ಕರೆ ಬಂದಿತ್ತು. ಈ ವರ್ಷದ ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಇದುವರೆಗೆ 10 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ವೈಭವ್‌ 295 ರನ್‌ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 45 ರನ್‌ ಸಿಡಿಸಿದ್ದು ಅವರ ಇತ್ತೀಚಿನ ಗಮನಾರ್ಹ ಪ್ರದರ್ಶನವಾಗಿದೆ.

ಕುಟುಂಬದೊಂದಿಗೆ ಟಾಟಾ ಶೋರೂಂನಲ್ಲಿ ಕಾಣಿಸಿಕೊಂಡ ವೈಭವ್‌

ಇತ್ತೀಚೆಗೆ ವೈಭವ್‌ ಸೂರ್ಯವಂಶಿ ತಮ್ಮ ಕುಟುಂಬದೊಂದಿಗೆ ಟಾಟಾ ಕಾರುಗಳ ಶೋರೂಂಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಐಪಿಎಲ್‌ 2026ರ ‘ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಸೀಸನ್‌’ ಪ್ರಶಸ್ತಿಗಾಗಿ ಅವರಿಗೆ ಟಾಟಾ ಸಿಯೆರಾ ಎಸ್‌ಯುವಿ ಹಸ್ತಾಂತರಿಸಲಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹಳದಿ ಬಣ್ಣದ ಟಾಟಾ ಸಿಯೆರಾ ಕಾರಿನ ಮುಂದೆ ವೈಭವ್‌ ತಮ್ಮ ತಂದೆ-ತಾಯಿ ಹಾಗೂ ಸಹೋದರರೊಂದಿಗೆ ನಿಂತು ಫೋಟೋಗೆ ಪೋಸ್‌ ನೀಡಿದ್ದಾರೆ. ಯುವ ಆಟಗಾರನಿಗೆ ದೊರೆತ ಈ ದುಬಾರಿ ಉಡುಗೊರೆಯನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

Scroll to load tweet…

ಈಗಾಗಲೇ ವೈಭವ್‌ ಬಳಿ ಟಾಟಾ ಕರ್ವ್‌ ಇವಿ ಕಾರು

ಟಾಟಾ ಸಿಯೆರಾ ವೈಭವ್‌ ಸೂರ್ಯವಂಶಿ ಅವರ ಕಾರುಗಳ ಸಂಗ್ರಹಕ್ಕೆ ಸೇರ್ಪಡೆಯಾಗುತ್ತಿರುವ ಮೊದಲ ವಾಹನವೇನಲ್ಲ. ಈ ಹಿಂದೆ ಐಪಿಎಲ್‌ 2025ರಲ್ಲಿ ‘ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಸೀಸನ್‌’ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಅವರಿಗೆ ಟಾಟಾ ಕರ್ವ್‌ ಇವಿ (Tata Curvv EV) ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಐಪಿಎಲ್‌ನ ಚೊಚ್ಚಲ ಋತುವಿನಲ್ಲೇ ವೈಭವ್‌ ತೋರಿದ್ದ ನಿರ್ಭೀತ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನಕ್ಕೆ ಮನ್ನಣೆಯಾಗಿ ಈ ಎಲೆಕ್ಟ್ರಿಕ್‌ ಎಸ್‌ಯುವಿಯನ್ನು ನೀಡಲಾಗಿತ್ತು. ಇದೀಗ ಮತ್ತೊಂದು ಐಪಿಎಲ್‌ ಋತುವಿನಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಅವರು ಟಾಟಾ ಸಿಯೆರಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್‌ 2026ರಲ್ಲಿ 776 ರನ್‌; ಆರೆಂಜ್‌ ಕ್ಯಾಪ್‌ ಒಲಿದಿತ್ತು

ಐಪಿಎಲ್‌ 2026ರಲ್ಲಿ ವೈಭವ್‌ ಸೂರ್ಯವಂಶಿ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದರು. ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ ಒಟ್ಟು 776 ರನ್‌ ಗಳಿಸುವ ಮೂಲಕ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿದ್ದರು. ಈ ಮೂಲಕ ಪ್ರತಿಷ್ಠಿತ ಆರೆಂಜ್‌ ಕ್ಯಾಪ್‌ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಅವರ ಬ್ಯಾಟ್‌ನಿಂದ 63 ಬೌಂಡರಿ ಹಾಗೂ 72 ಸಿಕ್ಸರ್‌ಗಳು ಸಿಡಿದಿದ್ದವು. ಟೂರ್ನಿಯಲ್ಲಿ ಐದು ಅರ್ಧಶತಕ ಮತ್ತು ಒಂದು ಶತಕ ದಾಖಲಿಸಿದ್ದ ವೈಭವ್‌, ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನವೇ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಪ್ರಮುಖ ಆಕರ್ಷಣೆಯಾಗಿತ್ತು.

ಬಿಹಾರ ಹಿರಿಯರ ತಂಡದ ನಾಯಕನಾಗಿಯೂ ಆಯ್ಕೆ

15ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವೈಭವ್‌ ಸೂರ್ಯವಂಶಿ, ವಿಶ್ವದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿ ಅವರ ಹೆಗಲೇರಿದೆ. ಬಿಹಾರ ಹಿರಿಯರ ಪುರುಷರ ಕ್ರಿಕೆಟ್‌ ತಂಡದ ನಾಯಕನಾಗಿ ವೈಭವ್‌ ಅವರನ್ನು ನೇಮಕ ಮಾಡಲಾಗಿದೆ. 2026ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ತಂಡದ ಆರಂಭಿಕ ಎರಡು ಪಂದ್ಯಗಳಲ್ಲಿ ಅವರು ನಾಯಕತ್ವ ವಹಿಸಲಿದ್ದಾರೆ. ಹೀಗಾಗಿ, ಮೈದಾನದ ಹೊರಗೆ ಹೊಸ ಕಾರಿನ ಸಂಭ್ರಮದಲ್ಲಿರುವ ಯುವ ಆಟಗಾರ, ಮೈದಾನದಲ್ಲಿ ನಾಯಕನಾಗಿ ಹೊಸ ಸವಾಲಿಗೆ ಸಜ್ಜಾಗಿದ್ದಾರೆ.