ಅಹಮದಾಬಾದ್‌(ಮಾ.19): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಆಕರ್ಷಕ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ತಬ್ಬಿಕೊಳ್ಳುವಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿದ್ದಾರೆ.
 
ಇಂಗ್ಲೆಂಡ್ ವಿರುದ್ದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರಾದರೂ, ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಬಳಿಕ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ 4ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೂರ್ಯ ಕೇವಲ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಆಕರ್ಷಕ 57 ರನ್‌ ಬಾರಿಸಿದರು. ಆದರೆ ಸೂರ್ಯ ಕುಮಾರ್ ಯಾದವ್ ಔಟ್ ಆದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸೂರ್ಯಕುಮಾರ್‌ ಬಾರಿಸಿದ ಚೆಂಡನ್ನು ಥರ್ಡ್‌ಮನ್‌ ಕ್ಷೇತ್ರದಲ್ಲಿದ್ದ ಮಲಾನ್‌ ಹಿಡಿದರು. ಆದರೆ ಕ್ಯಾಚ್‌ ಪೂರ್ಣಗೊಂಡಿದ್ದರ ಬಗ್ಗೆ ಅನುಮಾನವಿದ್ದ ಕಾರಣ ಮೈದಾನದಲ್ಲಿದ್ದ ಅಂಪೈರ್‌ 3ನೇ ಅಂಪೈರ್‌ ಸಲಹೆ ಕೇಳಲು ನಿರ್ಧರಿಸಿದರು. ಆದರೆ ನಿಯಮದ ಪ್ರಕಾರ ಸಾಫ್ಟ್‌ ಸಿಗ್ನಲ್‌ ನೀಡಬೇಕಿದ್ದರಿಂದ ಔಟ್‌ ಎಂದು ಅಭಿಪ್ರಾಯಿಸಿದ್ದರು. 

ಮೊದಲ ಎಸೆತದಲ್ಲೇ ಸಿಕ್ಸರ್; ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ದಾಖಲೆ!

3ನೇ ಅಂಪೈರ್‌ ಬಹಳ ಹೊತ್ತು ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಚೆಂಡು ನೆಲಕ್ಕೆ ತಗುಲಿದ್ದು ಸ್ಪಷ್ಟವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮೈದಾನದಲ್ಲಿದ್ದ ಆಂಪೈರ್‌ ನೀಡಿದ್ದ ತೀರ್ಪನ್ನೇ ಉಳಿಸಲು ನಿರ್ಧರಿಸಿದರು. ಇದು ವಿವಾದಕ್ಕೆ ಕಾರಣವಾಯಿತು. ಚೆಂಡಿನ ಕೆಲ ಭಾಗ ನೆಲಕ್ಕೆ ತಗುಲಿದ್ದು, ದೃಶ್ಯಗಳಲ್ಲಿ ಸ್ಪಷ್ಟವಾಗಿದ್ದರೂ ಔಟ್‌ ನೀಡಿದ್ದೇಕೆ ಎನ್ನುವ ಪ್ರಶ್ನೆ ಸಾಮಾಜಿಕ ತಾಣಗಳಲ್ಲಿ ಹುಟ್ಟಿಕೊಂಡಿತು. 

ವಿರೇಂದ್ರ ಸೆಹ್ವಾಗ್‌, ವಾಸೀಂ ಜಾಫರ್‌ ಸೇರಿದಂತೆ ಹಲವು ಮಂದಿ ಸಾಮಾಜಿಕ ಜಾಲತಾಣದ ಟ್ವೀಟ್‌ ಮೂಲಕ ಥರ್ಡ್‌ ಅಂಪೈರ್ ತೀರ್ಮಾನವನ್ನು ಟೀಕಿಸಿದ್ದಾರೆ.