ಅಂಪೈರ್ ನೋ ಬಾಲ್ ಕೊಟ್ಟಿದ್ದಕ್ಕೆ ಆಟಗಾರರ ನಡುವೆ ಭೀಕರ ಬಡಿದಾಟ..!
ಅಂಪೈರ್ ನೀಡಿದ ಒಂದು ನೋಬಾಲ್ ತೀರ್ಪು ಎರಡು ತಂಡಗಳ ಮಾರಾಮಾರಿಗೆ ಸಾಕ್ಷಿಯಾಗಿದೆ. ಹೊಡೆದಾಟದಲ್ಲಿ ಇಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಿಜಯಪುರ(ಜ.12): ಕ್ರಿಕೆಟ್ ಟೂರ್ನಮೆಂಟ್‌ವೊಂದರಲ್ಲಿ ಅಂಪೈರ್ ನೋಬಾಲ್ ನೀಡಿದ್ದಾರೆಂದು ಎರಡು ತಂಡದ ಆಟಗಾರರು ವಿಕೆಟ್, ಬ್ಯಾಟ್ ಹಾಗೂ ಬಾಲ್‌ಗಳಿಂದ ಬಡಿದಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣ ಅಂಜುಮನ್ ಶಾಲೆ ಮೈದಾನದಲ್ಲಿ ನಡೆದಿದೆ.
ಕಾಂಗ್ರೆಸ್ ಮಾಜಿ ಶಾಸಕ ಸಿ ಎಸ್ ನಾಡಗೌಡ ಅಭಿಮಾನಿಗಳು ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಮೆಂಟ್ ಕಳೆದ 12 ದಿನಗಳಿಂದ ನಡೆಯುತ್ತಿತ್ತು. ಹನ್ನೆರಡನೇ ದಿನದ ಟೂರ್ನಮೆಂಟ್ ವೇಳೆ ಈ ರೀತಿಯ ಅವಘಡ ಸಂಭವಿಸಿದೆ. ಅಲ್-ಹಕ್ ಸಿಸಿ ಹಾಗೂ ಇಂದಿರಾ ಸಿಸಿ ಮುದ್ದೇಬಿಹಾಳ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಲ್-ಹಕ್ ಸಿಸಿ ತಂಡದೆದುರು ಇಂದಿರಾ ಸಿಸಿ ತಂಡವು ಬ್ಯಾಟಿಂಗ್ ಮಾಡುತಿತ್ತು. ಈ ವೇಳೆ ಅಂಪೈರ್ ನೋ ಬಾಲ್ ನೀಡಿದ್ದಾರೆ. ಇದರ ಬೆನ್ನಲ್ಲೇ ಡೋಣಿ ಹಾಗೂ ಮನಗೊಳಿ ಗುಂಪುಗಳ ನಡುವೆ ಶುರುವಾದ ಸಣ್ಣ ಜಗಳ ಹೊಡೆದಾಟ ಬಡಿದಾಟದ ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸಿಡ್ನಿ ಟೆಸ್ಟ್ ಕೈಜಾರಲು ನಾನೇ ಕಾರಣ: ತಪ್ಪೊಪ್ಪಿಕೊಂಡ ಆಸೀಸ್ ನಾಯಕ..!
ಸಣ್ಣಗೆ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಸ್ಟಂಪ್ಸ್, ಬಡಿಗೆ ಹಾಗೂ ರಾಡ್‌ಗಳಿಂದ ಹೊಡೆದಾಟ ಆರಂಭವಾಗಿದೆ. ಈ ವೇಳೆ ಅಲ್ತಾಪ್ ಮನಗೂಳಿ, ಸದ್ದಾಂ ಮನಗೂಳಿ, ಪಾರುಕ್ ಡೋಣಿ ಎಂಬುವರಿಗೆ ಗಾಯವಾಗಿದ್ದು, ಇಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮನಗೂಳಿ ಗುಂಪಿನಿಂದ 41 ಜನರ ಮೇಲೆ, ಡೋಣಿ ಗುಂಪಿನಿಂದ 30 ಜನರ ವಿರುದ್ಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.