ಸಿಡ್ನಿ(ಜ.12): ಆಸ್ಪ್ರೇಲಿಯಾ ಗೆಲ್ಲದಿರಲು ತಾವೇ ಕಾರಣ ಎಂದು ನಾಯಕ ಟಿಮ್‌ ಪೇನ್‌ ಒಪ್ಪಿಕೊಂಡಿದ್ದು, ತಾವು 3 ಕ್ಯಾಚ್‌ ಬಿಟ್ಟಿದ್ದು ದುಬಾರಿಯಾಯಿತು ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯ ರೋಚಕವಾದ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು,  ನನ್ನ ಕೀಪಿಂಗ್‌ ಕೌಶಲ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಇಂಥ ಕೆಟ್ಟ ದಿನವನ್ನು ನಾನು ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಾನ್‌ ಅಬಾಟ್‌ ಸಹ ಒಂದು ಕ್ಯಾಚ್‌ ಕೈಚೆಲ್ಲಿ ಭಾರತ ಡ್ರಾ ಸಾಧಿಸಲು ನೆರವಾದರು.

ಕೆಟ್ಟರೂ ಬುದ್ದಿ ಕಲಿತಂತಿಲ್ಲ ಆಸೀಸ್‌ ಕ್ರಿಕೆಟಿಗ ಸ್ಟೀವ್ ಸ್ಮಿತ್‌..!

ಸಿಡ್ನಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾ ತಂಡವು ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾಗೆ 407 ರನ್‌ಗಳ ಗುರಿ ನೀಡಿತ್ತು. ರಿಷಭ್‌ ಪಂತ್‌ ಹಾಗೂ ಚೇತೇಶ್ವರ್ ಪೂಜಾರ ಮತ್ತು ಹನುಮ ವಿಹಾರಿ-ಆರ್ ಅಶ್ವಿನ್‌ ಮುರಿಯದ ಜತೆಯಾಟ ತಂಡವನ್ನು ಸೋಲಿನಿಂದ ಪಾರು ಮಾಡಿತು. 
 
ಅಗ್ರ 2 ಸ್ಥಾನ ಕಾಯ್ದುಕೊಂಡ ಆಸ್ಪ್ರೇಲಿಯಾ, ಭಾರತ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಆಸ್ಪ್ರೇಲಿಯಾ ಹಾಗೂ ಭಾರತ ಅಗ್ರ 2 ಸ್ಥಾನಗಳನ್ನು ಉಳಿಸಿಕೊಂಡಿವೆ. ಆಸ್ಪ್ರೇಲಿಯಾ ಶೇ 73.8 ಅಂಕ ಪ್ರತಿಶತ ಹೊಂದಿದ್ದರೆ, ಭಾರತ ಶೇ.70.2 ಅಂಕ ಪ್ರತಿಶತ ಹೊಂದಿದೆ.

ಬ್ರಿಸ್ಬೇನ್‌ನಲ್ಲಿ ಜ.15ರಿಂದ 4ನೇ ಟೆಸ್ಟ್‌ ಆರಂಭ

ಕೋವಿಡ್‌ ಕಾರಣದಿಂದಾಗಿ 4ನೇ ಟೆಸ್ಟ್‌ ಆಯೋಜನೆ ಬಗ್ಗೆ ಎದ್ದಿದ್ದ ಗೊಂದಲಗಳು ದೂರವಾಗಿವೆ. ಪಂದ್ಯ ಬ್ರಿಸ್ಬೇನ್‌ನಲ್ಲೇ ನಡೆಯಲಿದೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾದ ಮುಖ್ಯಸ್ಥ ನಿಕ್‌ ಹಾಕ್ಲೆ ತಿಳಿಸಿದ್ದಾರೆ. ಪಂದ್ಯಕ್ಕೆ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರೇಕ್ಷಕರನ್ನು ಬಿಡಲು ನಿರ್ಧರಿಸಲಾಗಿದೆ. ಆಟಗಾರರಿಗೆ ಕಠಿಣ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ಹಾಕ್ಲೆ ಹೇಳಿದ್ದಾರೆ.