ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯದ ವಿವರ ಇಲ್ಲಿದೆ ನೋಡಿ...
ಪೋಚೆಫ್‌ಸ್ಟ್ರೋಮ್(ಫೆ.04): 4 ಬಾರಿಯ ಚಾಂಪಿಯನ್ ಭಾರತ, ಐಸಿಸಿ ಅಂಡರ್-19 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮಂಗಳವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದ್ದು, ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಟೂರ್ನಿಯಲ್ಲಿ ಎರಡೂ ತಂಡಗಳು ಅಜೇಯವಾಗಿ ಉಳಿದಿವೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ, ಆಸ್ಪ್ರೇಲಿಯಾ ವಿರುದ್ಧ ಜಯಗಳಿಸಿದರೆ, ಪಾಕಿಸ್ತಾನ ತಂಡ ಆಫ್ಘಾನಿಸ್ತಾನವನ್ನು ಬಗ್ಗುಬಡಿದು ಅಂತಿಮ 4ರ ಹಂತಕ್ಕೆ ಪ್ರವೇಶಿಸಿತ್ತು.
ಅಂಡರ್-19 ವಿಶ್ವಕಪ್: ಭಾರತ vs ಪಾಕ್ ಸೆಮೀಸ್!
ಹಿರಿಯರ ತಂಡದಂತೆ ಕಿರಿಯರೂ ಸಹ ಪಾಕಿಸ್ತಾನದ ಮೇಲೆ ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಚಾಂಪಿಯನ್ ಆಗಿತ್ತು. ಅಲ್ಲದೇ 2018ರ ಅಂಡರ್-19 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ 20 ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು.
ಯಶಸ್ವಿಗೆ ಮತ್ತೆ ಯಶಸ್ಸು?: ಭಾರತ ತಂಡ ತನ್ನ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. 4 ಪಂದ್ಯಗಳಲ್ಲಿ ಯಶಸ್ವಿ 3 ಅರ್ಧಶತಕ ಸಿಡಿಸಿದ್ದಾರೆ. ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಭಾರತ ಚಾಂಪಿಯನ್ ಪಟ್ಟಕ್ಕೇರಬೇಕಿದ್ದರೆ, ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಇನ್ನಿಂಗ್ಸ್‌ಗಳ ಅವಶ್ಯಕತೆ ಇದೆ. ಪಾಕಿಸ್ತಾನದ ವೇಗಿಗಳಾದ ಅಬ್ಬಾಸ್ ಅಫ್ರಿದಿ, ಮೊಹಮದ್ ಆಮೀರ್ ಖಾನ್ ಹಾಗೂ ತಾಹಿರ್ ಹುಸೇನ್‌ರ ದಾಳಿಯನ್ನು ಎದುರಿಸುವುದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ.
ಅಂಡರ್-19 ವಿಶ್ವಕಪ್: ಭಾರತ ಸೆಮಿಫೈನಲ್‌ಗೆ ಪ್ರವೇಶ
ಆಲ್ರೌಂಡರ್ ಅಥರ್ವ ಅಂಕೋಲೆಕರ್, ಲೆಗ್ ಸ್ಪಿನ್ನರ್ ರವಿ ಬಿಶ್ನಾಯ್, ವೇಗಿಗಳಾದ ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಬೌಲರ್‌ಗಳ ಸಾಹಸದಿಂದ ಕ್ವಾರ್ಟರ್ ಫೈನಲ್‌ನಲ್ಲಿ ಕಾಂಗರೂಗಳನ್ನು ಕಟ್ಟಿಹಾಕಿದ್ದ ಭಾರತ, ಪಾಕಿಸ್ತಾನ ವಿರುದ್ಧ ಸಾಂಘಿಕ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
ಪಾಕಿಸ್ತಾನ ತನ್ನ ಆರಂಭಿಕ ಬ್ಯಾಟ್ಸ್‌ಮನ್ ಮೊಹಮದ್ ಹುರೈರಾ, ನಾಯಕ ರೊಹೈಲ್ ನಾಜಿರ್ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಸಮಬಲದ ಪ್ರದರ್ಶನ!
ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸಮಬಲದ ಪ್ರದರ್ಶನ ತೋರಿವೆ. ಭಾರತ ತಂಡದ ಗರಿಷ್ಠ ಮೊತ್ತ 297, ಪಾಕಿಸ್ತಾನ ತಂಡದ್ದು 294. ಭಾರತ 4 ಪಂದ್ಯಗಳಲ್ಲಿ 40 ವಿಕೆಟ್ ಕಬಳಿಸಿದೆ. ಪಾಕಿಸ್ತಾನ 39 ವಿಕೆಟ್ ಕಿತ್ತಿದೆ. ಹೀಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
ಪಂದ್ಯ ರದ್ದಾದರೆ ಭಾರತ ಫೈನಲ್‌ಗೆ!
ಪೋಚೆಫ್‌ಸ್ಟ್ರೋಮ್‌ನಲ್ಲಿ ಹೆಚ್ಚೂ ಕಡಿಮೆ ಪ್ರತಿ ದಿನ ಮಳೆ ಬೀಳಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ನಿಯಮದ ಪ್ರಕಾರ ಭಾರತ ಫೈನಲ್‌ಗೆ ಪ್ರವೇಶಿಸಲಿದೆ. ಕಾರಣ, ಗುಂಪು ಹಂತದಲ್ಲಿ ಭಾರತ ಹೆಚ್ಚು ಗೆಲುವು ಸಾಧಿಸಿದೆ. ಪಾಕಿಸ್ತಾನ ಸೋಲು ಕಂಡಿಲ್ಲವಾದರೂ, ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮಂಗಳವಾರ ಶೇ.20ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಇಲ್ಲಿನ ಪಿಚ್ ಅತಿಯಾಗಿ ಬಳಕೆಯಾಗಿದ್ದು, ಪಂದ್ಯದಿಂದ ಪಂದ್ಯಕ್ಕೆ ದಾಖಲಾಗುತ್ತಿರುವ ಸ್ಕೋರ್‌ಗಳಲ್ಲಿ ಇಳಿಕೆಯಾಗಿದೆ. ಬ್ಯಾಟ್ಸ್‌ಮನ್‌ಗಳಿಗೆ ಹೊಸ ಚೆಂಡನ್ನು ಎದುರಿಸುವುದು ಸವಾಲಾಗಿ ಪರಿಣಮಿಸಲಿದೆ. ಇನ್ನಿಂಗ್ಸ್ ಸಾಗಿದಂತೆ ಸ್ಪಿನ್ನರ್‌ಗಳಿಗೆ ನೆರವು ದೊರೆಯಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಂ ಗರ್ಗ್(ನಾಯಕ), ಧೃವ್ ಜುರೆಲ್, ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಶ್ನಾಯ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್.
ಪಾಕಿಸ್ತಾನ: ಹೈದರ್ ಅಲಿ, ಮೊಹಮದ್ ಹುರೈರಾ, ರೊಹೈಲ್ ನಾಜಿರ್ (ನಾಯಕ), ಮುನಿರ್, ಖಾಸಿಮ್ ಅಕ್ರಂ, ಮೊಹಮದ್ ಹ್ಯಾರಿಸ್, ಇರ್ಫಾನ್ ಖಾನ್, ಅಬ್ಬಾಸ್ ಅಫ್ರಿದಿ, ತಾಹಿರ್ ಹುಸೇನ್, ಆಮೀರ್ ಅಲಿ, ಆಮಿರ್ ಖಾನ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 3
