ನವದೆಹಲಿ(ಏ.01): 14ನೇ ಆವೃತ್ತಿಯ ಐಪಿಎಲ್‌ಗೆ ಪಂಜಾಬ್‌ ಕಿಂಗ್ಸ್‌ ನೂತನ ಜೆರ್ಸಿ ಬಿಡುಗಡೆ ಮಾಡಿದ್ದು, ಅದು 2009ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಧರಿಸಿದ್ದ ಜೆರ್ಸಿಯಂತಿದೆ ಎಂದು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಅಭಿಪ್ರಾಯಿಸಿದ್ದಾರೆ. 

2009ರಲ್ಲಿ ಆರ್‌ಸಿಬಿ ನಾಯಕರಾಗಿದ್ದ ಅನಿಲ್‌ ಕುಂಬ್ಳೆ ಈಗ ಪಂಜಾಬ್‌ ತಂಡದ ಕೋಚ್‌ ಆಗಿದ್ದು, ವಿವಿಧ ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಆಡಿದ 9 ಆಟಗಾರರು ಈಗ ಪಂಜಾಬ್‌ ತಂಡದಲ್ಲಿದ್ದಾರೆ. ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್‌ ತಂಡ ಮುಂದಿನ ವರ್ಷ ‘ಮಾಜಿ ಆರ್‌ಸಿಬಿ’ ಎಂದು ತಂಡದ ಹೆಸರನ್ನು ಬದಲಿಸಿಕೊಂಡರೆ ಅಚ್ಚರಿಯಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಪಂಜಾಬ್‌ ಫ್ರಾಂಚೈಸಿ ಕಿಂಗ್ಸ್‌ ಇಲೆವನ್ ಪಂಜಾಬ್‌ ಹೆಸರನ್ನು ಪಂಜಾಬ್ ಕಿಂಗ್ಸ್‌ ಎಂದು ಬದಲಿಸಿಕೊಂಡಿದೆ. ಹೊಸ ಹೆಸರು, ಹೊಸ ಲೋಗೋದೊಂದಿಗೆ ಈ ಬಾರಿ ಕಣಕ್ಕಿಳಿಯುತ್ತಿರುವ ಪಂಜಾಬ್‌ ತಂಡ ಚೊಚ್ಚಲ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ.