ಆಗರ್ತಲಾ(ಜೂ.22): ತ್ರಿಪುರ ಅಂಡರ್ 19 ಕ್ರಿಕೆಟ್ ಆಟಗಾರ್ತಿ ಅಯಾಂತಿ ರೇಂಗ್(16) ಅವರ ಮೃತದೇಹ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ಅಯಾಂತಿ ಕಳೆದೊಂದು ವರ್ಷದಿಂದ ರಾಜ್ಯ ಅಂಡರ್ 19 ತಂಡದ ಪರ ಕ್ರಿಕೆಟ್ ಆಡುತ್ತಿದ್ದರು.

ಅಯಾಂತಿ ಸಾವಿಗೆ ನಿಜವಾದ ಮಾಹಿತಿ ತಿಳಿದು ಬಂದಿಲ್ಲ. ಗ್ರಾಮೀಣ ಪ್ರತಿಭೆ ಅರಳುವ ಮುನ್ನವೇ ಮುದುಡಿ ಹೋದಂತಿ ಆಗಿದೆ. ರೇಂಗ್ ಎನ್ನುವ ಬುಡಕಟ್ಟು ಜನಾಂಗಕ್ಕೆ ಸೇರಿದ್ದ ಅಯಾಂತಿ, ರಾಜ್ಯರಾಜಧಾನಿ ಆಗರ್ತಲಾದಿಂದ ಸುಮಾರು 90 ಕಿಲೋ ಮೀಟರ್ ದೂರದ ತೈನಾನಿ ಹಳ್ಳಿಯವರಾಗಿದ್ದರು. ಅಯಾಂತಿ ನಾಲ್ವರು ಸೋದರಿಯರ ಪೈಕಿ ಕೊನೆಯವರಾಗಿದ್ದರು.

ಅಪ್ಪನ ಫೋಟೋ ಜೊತೆ ಕೊಹ್ಲಿ ಭಾವನಾತ್ಮಕ ಸಂದೇಶ

ತ್ರಿಪುರ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ತಿಮೀರ್ ಚಂದ್ ಯುವ ಕ್ರಿಕೆಟ್ ಆಟಗಾರ್ತಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಯಾಂತಿ ರೇಂಗ್ ಎನ್ನುವ ಭವಿಷ್ಯದ ಪ್ರತಿಭೆಯನ್ನು ರಾಜ್ಯ ಕಳೆದುಕೊಂಡಿದೆ. ಅಯಾಂತಿ ಕ್ರಿಕೆಟ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದರು. ಅವರ ಅಕಾಲಿಕ ಸಾವಿನ ಸುದ್ದಿ ಆಘಾತ ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.

ಅಯಾಂತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ತಿಮೀರ್ ಚಂದ್, ಕಳೆದ ಸೀಸನ್ ಅಂತ್ಯದವರೆಗೂ ಚೆನ್ನಾಗಿಯೇ ಇದ್ದರು. ಆದರೆ ಆಕೆಯ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಅಷ್ಟು ಗೊತ್ತಿಲ್ಲ ಎಂದಿದ್ದಾರೆ.