2026ರ ಐಪಿಎಲ್‌ನಲ್ಲಿ ಆಡಲು ಸಜ್ಜಾಗಿರುವ 10 ಯುವ ಭಾರತೀಯ ಕ್ರಿಕೆಟ್ ಪ್ರತಿಭೆಗಳ ಮೇಲೆ ಎಲ್ಲರ ಕಣ್ಣಿದೆ. ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಕೋಟಿಗಟ್ಟಲೆ ಹಣಕ್ಕೆ ಹರಾಜಾಗಿರುವ ಈ ಆಟಗಾರರು ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ.  

ಬೆಂಗಳೂರು: 2026ರ ಐಪಿಎಲ್‌ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಭಾರತದ 10 ಯುವ ಪ್ರತಿಭೆಗಳಿವರು. ದೇಶಿ ಟಿ20 ಟೂರ್ನಿಗಳಲ್ಲಿ ಅಬ್ಬರಿಸಿ, ಫ್ರಾಂಚೈಸಿಗಳ ಗಮನ ಸೆಳೆದು ಕೋಟಿ ಕೋಟಿ ರುಪಾಯಿ ಹಣಕ್ಕೆ ಬಿಕರಿಯಾಗಿದ್ದಾರೆ. ಇವರೆಲ್ಲರೂ ಮೊದಲ ಸಲ ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅಭಿಮಾನಿಗಳು ಇವರ ಮೇಲೆ ಕಣ್ಣಿಡಬೇಕು.

ಟಾಪ್-10 ಪಟ್ಟಿಯಲ್ಲಿ ಯಾರಿದ್ದಾರೆ?

1. ಆರ್‌.ಸ್ಮರಣ್‌ , ಸನ್‌ರೈಸರ್ಸ್‌

ಕಳೆದ ವರ್ಷ ಆ್ಯಡಂ ಜಂಪಾ ಬದಲು ಸನ್‌ರೈಸರ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಆಡುವ ಅವಕಾಶ ಸಿಗುವ ಮೊದಲೇ ಗಾಯಗೊಂಡು ಹೊರಬಿದ್ದರು. ಈ ವರ್ಷ ಹರಾಜಿಗೂ ಮೊದಲೇ ಕರ್ನಾಟಕದ ಎಡಗೈ ಬ್ಯಾಟರ್‌ ರವಿಚಂದ್ರನ್‌ ಸ್ಮರಣ್‌ರನ್ನು ಸನ್‌ರೈಸರ್ಸ್‌ ರೀಟೈನ್‌ ಮಾಡಿಕೊಂಡಿತ್ತು. ಈ ದೇಸಿ ಋತುವಿನಲ್ಲಿ ರಾಶಿ ರಾಶಿ ರನ್‌ ಗಳಿಸಿರುವ ಬ್ಯಾಟರ್‌. ಟಿ20ಯಲ್ಲಿ 163ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

2. ಕಾರ್ತಿಕ್‌ ಶರ್ಮಾ, ಸಿಎಸ್‌ಕೆ

ರಾಜಸ್ಥಾನದ 19 ವರ್ಷದ ಈ ವಿಕೆಟ್‌ ಕೀಪರ್‌ ಬ್ಯಾಟರ್‌ನನ್ನು ಮಿನಿ ಹರಾಜಿನಲ್ಲಿ ಬರೋಬ್ಬರಿ ₹14.20 ಕೋಟಿ ಕೊಟ್ಟು ಸಿಎಸ್‌ಕೆ ಖರೀದಿಸಿತ್ತು. ತಮ್ಮ ಸ್ಫೋಟಕ ಆಟದ ಮೂಲಕ ಕ್ರಿಕೆಟ್‌ ಚೆಂಡನ್ನು ‘ಪುಡಿ’ ಮಾಡುವ ಸಾಮರ್ಥ್ಯ ಇರುವ ಆಟಗಾರ. ಚೆನ್ನೈ ತಂಡಕ್ಕೆ ದೀರ್ಘಕಾಲದ ಆಸ್ತಿಯಾಗಬಲ್ಲ ಪ್ರತಿಭೆ. ರಣಜಿ, ಲಿಸ್ಟ್‌ ‘ಎ’ನಲ್ಲಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಸಿಕ್ಸ್‌ ಮಷಿನ್‌ ಎಂದೇ ಖ್ಯಾತಿ.

3. ಸಾಹಿಲ್‌ ಅರೋರಾ, ಸನ್‌ರೈಸರ್ಸ್‌

ಪಂಜಾಬ್‌ನ ಈ ಬ್ಯಾಟಿಂಗ್‌ ಪ್ರತಿಭೆ ಇತ್ತೀಚೆಗೆ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಜಾರ್ಖಂಡ್‌ ವಿರುದ್ಧ ಕೇವಲ 45 ಎಸೆತದಲ್ಲಿ 125 ರನ್‌ ಚಚ್ಚಿದ್ದರು. ಟೂರ್ನಿಯಲ್ಲಿ ಕೇವಲ 8 ಇನ್ನಿಂಗ್ಸಲ್ಲಿ 198ರ ಸ್ಟ್ರೈಕ್‌ರೇಟ್‌ನಲ್ಲಿ 358 ರನ್‌ ದಾಖಲಿಸಿದ್ದ ಸಾಹಿಲ್‌ ಅರೋರಾರನ್ನು ಸನ್‌ರೈಸರ್ಸ್‌ ₹1.5 ಕೋಟಿಗೆ ಖರೀದಿಸಿತ್ತು. ಮೊನ್ನೆಯಷ್ಟೇ ಸನ್‌ರೈಸರ್ಸ್‌ ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ 5 ಎಸೆತದಲ್ಲಿ 5 ಸಿಕ್ಸರ್‌ ಚಚ್ಚಿದ್ದರು.

4. ತೇಜಸ್ವಿ ದಹಿಯಾ, ಕೆಕೆಆರ್‌

ಮನಸೋ ಇಚ್ಛೆ ಸಿಕ್ಸರ್‌ ಸಿಡಿಸುವ ದೆಹಲಿಯ ವಿಕೆಟ್‌ ಕೀಪರ್‌ ಬ್ಯಾಟರ್‌ ತೇಜಸ್ವಿ ಸಿಂಗ್‌ ದಹಿಯಾರನ್ನು ಕೆಕೆಆರ್‌ ₹3 ಕೋಟಿಗೆ ಖರೀದಿ ಮಾಡಿತ್ತು. ದೆಹಲಿ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ 190ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 339 ರನ್‌ ಚಚ್ಚಿದ್ದರು. ಅವರ ಬ್ಯಾಟ್‌ನಿಂದ ಬರೋಬ್ಬರಿ 29 ಸಿಕ್ಸರ್‌ ಸಿಡಿದಿತ್ತು. ಹರಾಜಿನಲ್ಲಿ ತೇಜಸ್ವಿಯನ್ನು ಖರೀದಿಸಲು ಹಲವು ತಂಡಗಳು ಪೈಪೋಟಿ ನಡೆಸಿದ್ದವು.

5. ದಾನಿಶ್‌ ಮಾಲೇವಾರ್‌, ಮುಂಬೈ

ವಿದರ್ಭದ ದಾನಿಶ್‌ ವಿಷ್ಣು ಮಾಲೇವಾರ್‌ ಈ ವರೆಗೂ ವೃತ್ತಿಪರ ಟಿ20 ಪಂದ್ಯವನ್ನೇ ಆಡಿಲ್ಲ. ತಮ್ಮ ರಾಜ್ಯದ ತಂಡದ ಪರ ಕೇವಲ 15 ಪ್ರಥಮ ದರ್ಜೆ ಪಂದ್ಯವನ್ನಾಡಿದ್ದಾರೆ. ಆದರೆ ಇವರಲ್ಲಿರುವ ಅಪಾರ ಪ್ರತಿಭೆಯನ್ನು ಗುರುತಿಸಿರುವ ಮುಂಬೈ ಇಂಡಿಯನ್ಸ್‌, ಈತನನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ದ್ವಿಶತಕ ಸಿಡಿಸಿದ್ದ ದಾನಿಶ್‌ ಟಿ20ಯಲ್ಲೂ ಸದ್ದು ಮಾಡಲು ಕಾಯುತ್ತಿದ್ದಾರೆ.

6. ಬ್ರಿಜೇಶ್ ಶರ್ಮಾ, ರಾಜಸ್ಥಾನ

ಜಮ್ಮು-ಕಾಶ್ಮೀರ ಮೂಲದ, ಸದ್ಯ ಬಂಗಾಳದಲ್ಲಿ ಕ್ರಿಕೆಟ್‌ ಬದುಕು ಕಟ್ಟಿಕೊಂಡಿರುವ ವೇಗಿ ಬ್ರಿಜೇಶ್ ಶರ್ಮಾರನ್ನು ರಾಜಸ್ಥಾನ ₹30 ಲಕ್ಷಕ್ಕೆ ಖರೀದಿಸಿತ್ತು. ಬ್ರಿಜೇಶ್‌ ತಂಡಕ್ಕೆ ಆಯ್ಕೆಯಾದಾಗ ಯಾವುದೇ ಮಾದರಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿರಲಿಲ್ಲ. ಆದರೆ ಬಂಗಾಳ ಟಿ20 ಲೀಗ್‌ನಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ರಾಜಸ್ಥಾನ ರಾಯಲ್ಸ್‌ ಸೇರಿದರು.

7. ಮಂಗೇಶ್‌ ಯಾದವ್‌, ಆರ್‌ಸಿಬಿ

₹5.2 ಕೋಟಿಗೆ ಆರ್‌ಸಿಬಿ ತಂಡ ಸೇರಿರುವ ಮಂಗೇಶ್‌ ಯಾದವ್‌ ಮೇಲೆ ಭಾರೀ ನಿರೀಕ್ಷೆ ಇದೆ. ಯಶ್‌ ದಯಾಳ್‌ ನಿರ್ವಹಿಸುತ್ತಿದ್ದ ಪಾತ್ರವನ್ನು ಮಂಗೇಶ್‌ ನಿಭಾಯಿಸಬೇಕಿದೆ. ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದ ಎಡಗೈ ವೇಗಿಗೆ ಹರಾಜಿನಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. 7 ವರ್ಷಗಳ ಹಿಂದೆ ಹಣಕ್ಕಾಗಿ ಟೆನಿಸ್‌ ಬಾಲ್‌ ಟೂರ್ನಿಗಳಲ್ಲಿ ಆಡುತ್ತಿದ್ದ ಮಂಗೇಶ್‌ಗೆ ಈಗ ಆರ್‌ಸಿಬಿಯ ತಾರೆಯಾಗಿ ಗುರುತಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

8. ಪ್ರಶಾಂತ್‌ ವೀರ್‌, ಸಿಎಸ್‌ಕೆ

ಸಿಎಸ್‌ಕೆಯ ನೆಕ್ಸ್ಟ್‌ ರವೀಂದ್ರ ಜಡೇಜಾ ಎಂದೇ ಕರೆಸಿಕೊಳ್ಳುತ್ತಿರುವ ಪ್ರಶಾಂತ್‌ ವೀರ್‌, ಹರಾಜಿನಲ್ಲಿ ₹14.2 ಕೋಟಿ ಪಡೆದಿದ್ದರು. ಎಡಗೈ ಬ್ಯಾಟರ್‌, ಎಡಗೈ ಸ್ಪಿನ್ನರ್‌ ಆಗಿರುವ ಪ್ರಶಾಂತ್‌, ಬಿಸಿಸಿಐ ಕಿರಿಯರ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ. ತಮ್ಮ ಸಾರ್ಮಥ್ಯಕ್ಕೆ ತಕ್ಕ ಆಟವಾಡಿದರೆ ಚೆನ್ನೈ ತಂಡದಲ್ಲಿ ಬಹುಕಾಲ ಉಳಿಯಬಹುದು. ಉ.ಪ್ರದೇಶ ಟಿ20 ಲೀಗ್‌ನಲ್ಲಿ 320 ರನ್‌ ಗಳಿಸಿ, 8 ವಿಕೆಟ್‌ ಕಬಳಿಸಿದ್ದರು.

9. ಮುಕುಲ್‌ ಚೌಧರಿ, ಲಖನೌ

ದೇಸಿ ಕ್ರಿಕೆಟ್‌ನಲ್ಲಿ ರಾಜಸ್ಥಾನ ಪರ ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿ ಆಡುವ ಮುಕುಲ್‌ ಚೌಧರಿ, ಟಿ20ಯಲ್ಲಿ 166ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. 2025-26ರ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 5 ಇನ್ನಿಂಗ್ಸಲ್ಲಿ 198ರ ಸ್ಟ್ರೈಕ್‌ರೇಟ್‌ನಲ್ಲಿ 173 ರನ್‌ ಸಿಡಿಸಿದ್ದರು. ಹರಾಜಿನಲ್ಲಿ ಲಖನೌ ₹2.6 ಕೋಟಿ ನೀಡಿ ಖರೀದಿಸಿತ್ತು.

10. ಅಕಿಬ್‌ ನಬಿ, ಡೆಲ್ಲಿ

ಸದ್ಯ ಭಾರತೀಯ ವೇಗಿಗಳ ಪೈಕಿ ಅತ್ಯಂತ ಚಾಲ್ತಿಯಲ್ಲಿರುವ ಹೆಸರುಗಳಲ್ಲಿ ಒಂದು. ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ತಮ್ಮ ಸ್ವಿಂಗ್‌ ದಾಳಿ ಮೂಲಕ ಮನೆಮಾತಾಗಿದ್ದಾರೆ. ಹರಾಜಿನಲ್ಲಿ ಡೆಲ್ಲಿ ₹8.4 ಕೋಟಿಗೆ ಖರೀದಿಸಿತ್ತು. ಈಗಾಗಲೇ ಜಮ್ಮು-ಕಾಶ್ಮೀರ ಪರ 34 ಟಿ20 ಪಂದ್ಯಗಳನ್ನಾಡಿದ್ದು, 43 ವಿಕೆಟ್‌ ಕಿತ್ತಿದ್ದಾರೆ. ಆಕರ್ಷಕ 7.74ರ ಎಕಾನಮಿ ರೇಟ್‌ ಹೊಂದಿದ್ದಾರೆ.