* ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ* ದ್ವಿಶತಕ ಬಾರಿಸಿ ಮಿಂಚಿದ ಕಿವೀಸ್ ನಾಯಕ ಟಾಮ್ ಲೇಥಮ್* ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿ ಬಾಂಗ್ಲಾದೇಶಕ್ಕೆ ಶಾಕ್ ಕೊಟ್ಟ ಟ್ರೆಂಟ್ ಬೌಲ್ಟ್

ಕ್ರೈಸ್ಟ್‌ಚರ್ಚ್‌(ಜ.10): ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಆಘಾತಕಾರಿ ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದೆ. ನಾಯಕ ಟಾಮ್ ಲೇಥಮ್‌ ಆಕರ್ಷಕ ದ್ವಿಶತಕ ಹಾಗೂ ವೇಗಿ ಟ್ರೆಂಟ್ ಬೌಲ್ಟ್‌, ಟಿಮ್‌ ಸೌಥಿ ಮಾರಕ ದಾಳಿಯ ನೆರವಿನಿಂದ ಬಾಂಗ್ಲಾದೇಶ ತಂಡವನ್ನು ಎರಡನೇ ದಿನದಾಟದಂತ್ಯದ ವೇಳೆಗೆ ಕೇವಲ 126 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ ತಂಡವು 395 ರನ್‌ಗಳ ಹಿನ್ನೆಡೆ ಅನುಭವಿಸಿದೆ. 

ಕೇವಲ ಒಂದು ವಿಕೆಟ್ ಕಳೆದುಕೊಂಡು 349 ರನ್‌ಗಳೊಂದಿಗೆ ಎರಡನೇ ದಿನದಾಟವನ್ನು ಆರಂಭಿಸಿದ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. 99 ರನ್‌ ಗಳಿಸಿದ್ದ ಡೆವೊನ್ ಕಾನ್‌ವೇ ಎರಡನೇ ದಿನದಾಟದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಪೂರೈಸಿದರು. ಬಾಂಗ್ಲಾ ಎದುರಿನ ಮೊದಲ ಟೆಸ್ಟ್‌ನಲ್ಲೂ ಕಾನ್‌ವೇ ಶತಕ ಚಚ್ಚಿದ್ದರು. ಟಾಮ್ ಲೇಥಮ್ ಹಾಗೂ ಡೆವೊನ್ ಕಾನ್‌ವೇ ಜೋಡಿ ಎರಡನೇ ವಿಕೆಟ್‌ಗೆ 215 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಡೆವೊನ್ ಕಾನ್‌ವೇ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಕಾನ್‌ವೇ 166 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 109 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಆಕರ್ಷಕ ದ್ವಿತಕ ಚಚ್ಚಿದ ಟಾಮ್ ಲೇಥಮ್: ಮೊದಲ ದಿನದಾಟದಲ್ಲೇ ಅಜೇಯ 186 ರನ್‌ ಬಾರಿಸಿದ್ದ ನ್ಯೂಜಿಲೆಂಡ್ ತಂಡದ ಹಂಗಾಮಿ ನಾಯಕ ಟಾಮ್ ಲೇಥಮ್, ಎರಡನೇ ದಿನದಾಟದ ಆರಂಭದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ವೃತ್ತಿಜೀವನದ ಎರಡನೇ ಟೆಸ್ಟ್ ದ್ವಿತಕ ಬಾರಿಸಿ ಮಿಂಚಿದರು. ಬಾಂಗ್ಲಾ ಬೌಲರ್‌ಗಳ ಸವಾಲನ್ನು ದಿಟ್ಟವಾಗಿ ಮೆಟ್ಟಿನಿಂತ ಲೇಥಮ್‌ 373 ಎಸೆತಗಳನ್ನು ಎದುರಿಸಿ 34 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 252 ರನ್‌ ಬಾರಿಸಿ ಮೊಮಿನುಲ್‌ಗೆ ವಿಕೆಟ್ ಒಪ್ಪಿಸಿದರು. 

Scroll to load tweet…

ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಸ್ ಟೇಲರ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಅತ್ಯಂತ ಅನುಭವಿ ಬ್ಯಾಟರ್ ರಾಸ್ ಟೇಲರ್ ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ನ್ಯೂಜಿಲೆಂಡ್ ಪರ 112ನೇ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿಯುವ ಮೂಲಕ ಕಿವೀಸ್‌ ಪರ ಅತಿಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ಆಟಗಾರರ ಪಟ್ಟಿಯಲ್ಲಿ ಡೇನಿಯಲ್ ವೆಟ್ಟೋರಿ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ರಾಸ್ ಟೇಲರ್ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಾಗ ಬಾಂಗ್ಲಾದೇಶದ ಆಟಗಾರರು ಸಾಲಾಗಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು. ಅಂತಿಮ ಟೆಸ್ಟ್ ಪಂದ್ಯದಲ್ಲಿ ರಾಸ್ ಟೇಲರ್‌ 39 ಎಸೆಗಳನ್ನು ಎದುರಿಸಿ 4 ಬೌಂಡರಿ ಸಹಿತ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇನ್ನು ಹೆನ್ರಿ ನಿಕೋಲ್ಸ್ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದರೆ, ಡೇರಲ್ ಮಿಚೆಲ್ ಬ್ಯಾಟಿಂಗ್ 3 ರನ್‌ಗಳಿಗೆ ಸೀಮಿತವಾಯಿತು. ಇನ್ನು ವಿಕೆಟ್ ಕೀಪರ್‌ ಬ್ಯಾಟರ್‌ ಟಾಮ್ ಬ್ಲಂಡೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ 60 ಎಸೆತಗಳಲ್ಲಿ 8 ಬೌಂಡರಿ ಸಹಿತ 57 ರನ್‌ ಬಾರಿಸಿ ಅಜೇಯರಾಗುಳಿದರು. ಈ ಮೂಲಕ ತಂಡ 521 ರನ್ ಗಳಿಸಿದ್ದಾಗ ನ್ಯೂಜಿಲೆಂಡ್ ಪಡೆಯು ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಕಿವೀಸ್ ವೇಗಿಗಳ ದಾಳಿಗೆ ಬಾಂಗ್ಲಾದೇಶ ಧೂಳೀಪಟ..!

ಮೊದಲ ಟೆಸ್ಟ್ ಪಂದ್ಯ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಬಾಂಗ್ಲಾದೇಶ ತಂಡವು ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದೆ. ಕಿವೀಸ್‌ ವೇಗಿಗಳಾದ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಮಾರಕ ದಾಳಿಗೆ ಬಾಂಗ್ಲಾ ಬ್ಯಾಟರ್‌ಗಳಲ್ಲಿ ಉತ್ತರವೇ ಇರಲಿಲ್ಲ. ಬಾಂಗ್ಲಾದೇಶ ತಂಡವು ಕೇವಲ 11 ರನ್‌ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಇನ್ನು ಬಾಂಗ್ಲಾದೇಶ 27 ರನ್‌ ಗಳಿಸುವಷ್ಟರಲ್ಲಿ ಐವರು ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದರು. ಆರನೇ ವಿಕೆಟ್‌ಗೆ ನೂರುಲ್ ಹಸನ್ ಹಾಗೂ ಯಾಸಿರ್ ಅಲಿ 60 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. ಯಾಸಿರ್ ಅಲಿ 55 ರನ್ ಹಾಗೂ ನೂರಲ್ ಹಸನ್‌ 45 ರನ್ ಬಾರಿಸಿದ್ದು ಬಿಟ್ಟರೆ, ಬಾಂಗ್ಲಾದೇಶದ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

Coronavirus Threat: ವಿಂಡೀಸ್ ವಿರುದ್ದದ ಸರಣಿಗೂ ಶುರುವಾಗಿದೆ ಕೋವಿಡ್ ಭೀತಿ..!

300 ವಿಕೆಟ್‌ಗಳ ಕ್ಲಬ್ ಸೇರಿದ ಬೌಲ್ಟ್‌: ಕಿವೀಸ್ ಎಡಗೈ ಮಾರಕ ವೇಗಿ ಟ್ರೆಂಟ್ ಬೌಲ್ಟ್‌ ಬಾಂಗ್ಲಾ ಬ್ಯಾಟರ್‌ ಮೆಹದಿ ಹಸನ್ ವಿಕೆಟ್ ಕಬಳಿಸುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ನ್ಯೂಜಿಲೆಂಡ್‌ನ ನಾಲ್ಕನೇ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾದರು. ಈ ಮೊದಲು ರಿಚರ್ಡ್‌ ಹ್ಯಾಡ್ಲಿ, ಡೇನಿಯಲ್ ವೆಟ್ಟೋರಿ ಹಾಗೂ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ 300+ ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.

ಮಾರಕ ದಾಳಿ ನಡೆಸಿದ ಟ್ರೆಂಟ್ ಬೌಲ್ಟ್ 43 ರನ್ ನೀಡಿ 5 ವಿಕೆಟ್ ಪಡೆದರೆ, ಟಿಮ್‌ ಸೌಥಿ 3 ಹಾಗೂ ಕೈಲ್ ಜೇಮಿಸನ್ 2 ವಿಕೆಟ್‌ ಪಡೆದರು. ಇದೀಗ ನ್ಯೂಜಿಲೆಂಡ್ ತಂಡವು ಪ್ರವಾಸಿ ಬಾಂಗ್ಲಾದೇಶ ತಂಡದ ಮೇಲೆ ಫಾಲೋ ಆನ್ ಹೇರುತ್ತೋ ಅಥವಾ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ರಾಸ್ ಟೇಲರ್‌ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗಿಳಿಯಲು ಅವಕಾಶ ಮಾಡಿಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.