Asianet Suvarna News Asianet Suvarna News

Coronavirus Threat: ವಿಂಡೀಸ್ ವಿರುದ್ದದ ಸರಣಿಗೂ ಶುರುವಾಗಿದೆ ಕೋವಿಡ್ ಭೀತಿ..!

* ತವರಿನಲ್ಲಿ ವಿಂಡೀಸ್‌ ಎದುರಿನ ಕ್ರಿಕೆಟ್ ಸರಣಿ ಮೇಲೆ ಕೊರೋನಾ ವೈರಸ್ ಕೆಂಗಣ್ಣು

* ವಿಂಡೀಸ್ ಎದುರು ಫೆಬ್ರವರಿ 6ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭ

* ಸರಣಿಗೆ ಕೇವಲ ಒಂದು ಇಲ್ಲವೇ ಎರಡು ನಗರಗಳು ಆತಿಥ್ಯ ವಹಿಸುವ ಸಾಧ್ಯತೆ

Rising coronavirus Cases in India Raise Question Over Scheduling of India vs West Indies Series kvn
Author
Bengaluru, First Published Jan 10, 2022, 11:53 AM IST

ನವದೆಹಲಿ(ಜ.10): ದೇಶದಲ್ಲಿ ಕೊರೋನಾ ಸೋಂಕು (Coronavirus) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿ ಆಯೋಜನೆ ಬಿಸಿಸಿಐಗೆ (BCCI) ಸವಾಲಾಗಿ ಪರಿಣಮಿಸಿದೆ. ಫೆಬ್ರವರಿ 6ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಬೇಕಿದ್ದು, ಫೆಬ್ರವರಿ 15ರಿಂದ 20ರವರೆಗೆ 3 ಟಿ20 ಪಂದ್ಯಗಳು ನಡೆಯಲಿವೆ. ಪಂದ್ಯಗಳು 6 ವಿವಿಧ ನಗರಗಳಲ್ಲಿ ನಿಗದಿಯಾಗಿವೆ. ಆದರೆ ಆಟಗಾರರು ವಿವಿಧ ನಗರಗಳಿಗೆ ಪ್ರವೇಶಿಸಲು ಪ್ರಯಾಣ ನಿರ್ಬಂಧ, ಬಯೋಬಬಲ್‌(Bio-Bubble), ಕ್ವಾರಂಟೈನ್‌ ಸಮಸ್ಯೆ ಎದುರಾಗಲಿದೆ. ಹೀಗಾಗಿ 6 ನಗರಗಳಲ್ಲಿ ಪಂದ್ಯಗಳನ್ನು ನಡೆಸುವ ಯೋಜನೆ ಕೈಬಿಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸರಣಿಗೆ ಕೇವಲ ಒಂದು ಇಲ್ಲವೇ ಎರಡು ನಗರಗಳು ಆತಿಥ್ಯ ವಹಿಸಲಿವೆ ಎಂದು ಹೇಳಲಾಗುತ್ತಿದ್ದು, ಹೀಗಾದರೆ ಅಹಮದಾಬಾದ್‌ನಲ್ಲಿ ಏಕದಿನ ಹಾಗೂ ಕೋಲ್ಕತಾದಲ್ಲಿ ಟಿ20 ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ‘ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗ ಕೋವಿಡ್‌ ವೇಗವಾಗಿ ಹರಡುತ್ತಿದೆ. ಮುಂದೆ ಪರಿಸ್ಥಿತಿ ಅವಲೋಕಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಬಿಸಿಸಿಐ ಅಧಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಕಟಗೊಂಡಿರುವ ವೇಳಾಪಟ್ಟಿ ಹೀಗಿದೆ

ಕಳೆದ ವರ್ಷವೇ ಬಿಸಿಸಿಐ ಸರಣಿಯ ವೇಳಾಪಟ್ಟಿಯನ್ನು ಪ್ರಕಟ ಮಾಡಿತ್ತು. ಫೆಬ್ರವರಿ 6ರಂದು ಅಹಮದಾಬಾದ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಬೇಕಿದ್ದು, ಫೆಬ್ರವರಿ 9ಕ್ಕೆ ಜೈಪುರದಲ್ಲಿ 2ನೇ ಏಕದಿನ, ಫೆಬ್ರವರಿ 12ಕ್ಕೆ ಕೋಲ್ಕತಾದಲ್ಲಿ 3ನೇ ಏಕದಿನ ಪಂದ್ಯ ನಡೆಯಬೇಕಿದೆ. ಫೆಬ್ರವರಿ 15ಕ್ಕೆ ಕಟಕ್‌ನಲ್ಲಿ ಮೊದಲ ಟಿ20 ನಿಗದಿಯಾಗಿದ್ದು, ಫೆಬ್ರವರಿ 18ರಂದು ವಿಶಾಖಪಟ್ಟಣಂನಲ್ಲಿ 2ನೇ ಟಿ20, ಫೆಬ್ರವರಿ 20ಕ್ಕೆ ತಿರುವನಂತಪುರಂನಲ್ಲಿ 3ನೇ ಟಿ20 ಪಂದ್ಯ ನಡೆಯಬೇಕಿದೆ. ಫೆಬ್ರವರಿ 1ಕ್ಕೆ ವಿಂಡೀಸ್‌ ತಂಡ ಭಾರತಕ್ಕೆ ಆಗಮಿಸಲಿದ್ದು, ಫೆಬ್ರವರಿ 3ರ ವರೆಗೂ 3 ದಿನ ಆಟಗಾರರು ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಫೆಬ್ರವರಿ 4ರಿಂದ ಅಭ್ಯಾಸ ಆರಂಭಿಸಲಿದ್ದಾರೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ನಷ್ಟ!

ಬಿಸಿಸಿಐ ಕೇವಲ 2 ಕ್ರೀಡಾಂಗಣಗಳಲ್ಲಿ ಸರಣಿಗಳನ್ನು ಆಯೋಜಿಸಲು ನಿರ್ಧರಿಸಿದರೆ, ಉಳಿದ ರಾಜ್ಯ ಸಂಸ್ಥೆಗಳಿಗೆ ಪಂದ್ಯಗಳ ಆತಿಥ್ಯ ಕೈತಪ್ಪಲಿದೆ. ಒಡಿಶಾ, ಕೇರಳ, ಆಂಧ್ರ, ರಾಜಸ್ಥಾನ ಕ್ರಿಕೆಟ್‌ ಸಂಸ್ಥೆಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳು ಸಿಗುವುದಿಲ್ಲ. ಕೇರಳ, ಒಡಿಶಾದಂತಹ ಸಂಸ್ಥೆಗಳಿಗೆ ಐಪಿಎಲ್‌ ಪಂದ್ಯಗಳು ಸಿಗುವುದೂ ಕಷ್ಟ. ಹೀಗಾಗಿ ಆರ್ಥಿಕವಾಗಿ ಹಿಂದುಳಿದಿವೆ. ಇದೀಗ ಅಪರೂಪಕ್ಕೆ ಸಿಕ್ಕ ಅಂತಾರಾಷ್ಟ್ರೀಯ ಪಂದ್ಯಗಳೂ ಕೈತಪ್ಪಿದರೆ, ಮತ್ತಷ್ಟು ನಷ್ಟವಾಗಲಿದೆ.

Ind vs SA, Cape Town Test: ಕೇಪ್‌ಟೌನ್ ಚಾಲೆಂಜ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ..!

ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ?

ಪಂದ್ಯಗಳನ್ನು ವಿವಿಧ ಕ್ರೀಡಾಂಗಣಗಳಲ್ಲಿ ನಡೆಸಲು ಯೋಜಿಸಿದ್ದ ಬಿಸಿಸಿಐ, ಪ್ರೇಕ್ಷಕರಿಗೂ ಪ್ರವೇಶ ಕಲ್ಪಿಸಲು ಉದ್ದೇಶಿಸಿತ್ತು. ಶೇ.100ರಷ್ಟು ಇಲ್ಲದಿದ್ದರೂ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟನ್ನಾದರೂ ಭರ್ತಿ ಮಾಡಲು ಅನುಮತಿ ದೊರೆಯುವ ನಿರೀಕ್ಷೆ ಇತ್ತು. ಆದರೆ ಕೋವಿಡ್‌ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿರುವ ಕಾರಣ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಬಹುದು ಎನ್ನಲಾಗಿದೆ.

ವಿಂಡೀಸ್‌ ಕ್ರಿಕೆಟ್‌ ಆಯ್ಕೆ ಸಮಿತಿಗೆ ಸರವಣ್‌ ನೇಮಕ

ಸೇಂಟ್‌ ಜಾನ್ಸ್‌(ಆ್ಯಂಟಿಗಾ): ಮಾಜಿ ನಾಯಕ ರಾಮ್‌ನರೇಶ್‌ ಸರವಣ್‌ ವೆಸ್ಟ್‌ಇಂಡೀಸ್‌ ಪುರುಷರ ತಂಡಗಳ ಆಯ್ಕೆ ಸಮಿತಿಗೆ ನೇಮಕಗೊಂಡಿದ್ದಾರೆ. 2024ರ ವರೆಗೂ ಹಿರಿಯ ಹಾಗೂ ಯುವ ತಂಡಗಳ ಆಯ್ಕೆ ಸಮಿತಿಗಳ ಸದಸ್ಯರಾಗಿ ಕಾರ‍್ಯನಿರ್ವಹಿಸಲಿದ್ದಾರೆ. ವಿಂಡೀಸ್‌ನ ದಿಗ್ಗಜ ಬ್ಯಾಟರ್‌ ಡೆಸ್ಮಂಡ್‌ ಹೇಯ್ಸ್‌ ಆಯ್ಕೆ ಸಮಿತಿಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಅವರೊಂದಿಗೆ ಸರವಣ್‌ ಕೆಲಸ ಮಾಡಲಿದ್ದಾರೆ. ಸರವಣ್‌ 87 ಟೆಸ್ಟ್‌, 181 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Follow Us:
Download App:
  • android
  • ios