Asianet Suvarna News Asianet Suvarna News

Team India ಮಾಜಿ ಕೋಚ್ ರವಿಶಾಸ್ತ್ರಿ ವಿರುದ್ದ ಅಜಿಂಕ್ಯ ರಹಾನೆ ಪರೋಕ್ಷ ಅಸಮಾಧಾನ..!

* ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲಲು ನಾಯಕನಾಗಿ ನಾನು ತೆಗೆದುಕೊಂಡ ನಿರ್ಧಾರ ಕಾರಣ

* ಟೆಸ್ಟ್ ಸರಣಿ ಜಯಿಸಿದ ಬಳಿಕ ಈ ಯಶಸ್ಸನ್ನು ಮತ್ತೆ ಯಾರೋ ಹೈಜಾಕ್ ಮಾಡಿದರು

* ಮಾಜಿ ಕೋಚ್‌ ರವಿಶಾಸ್ತ್ರಿ ವಿರುದ್ಧ ಅಜಿಂಕ್ಯ ರಹಾನೆ ಪರೋಕ್ಷ ಆರೋಪ

Test Series win in Australia Someone else took credit for my decisions in Australia Says Ajinkya Rahane kvn
Author
Bengaluru, First Published Feb 11, 2022, 11:53 AM IST

ನವದೆಹಲಿ(ಫೆ.11): ಕಳಪೆ ಲಯದಿಂದಾಗಿ ಟೀಂ ಇಂಡಿಯಾದಿಂದಲೇ (Team India) ಹೊರ ಬೀಳುವ ಆತಂಕದಲ್ಲಿರುವ ಹಿರಿಯ ಬ್ಯಾಟರ್‌ ಅಜಿಂಕ್ಯ ರಹಾನೆ(Ajinkya Rahane), ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ವಿರುದ್ಧ ಪರೋಕ್ಷ ಆರೋಪ ಮಾಡಿದ್ದು, ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವಿನ ವೇಳೆ ನಾನು ತೆಗೆದುಕೊಂಡ ನಿರ್ಧಾರಗಳನ್ನು ಕೆಲವರು ತಮ್ಮದೆಂದು ಹೇಳಿಕೊಂಡು ಪ್ರಚಾರ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಅವರು, ‘ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲ್ಲಲು ನಾನು ಮೈದಾನ ಹಾಗೂ ಡ್ರೆಸ್ಸಿಂಗ್‌ ಕೋಣೆಯಲ್ಲಿ ತೆಗೆದುಕೊಂಡಿದ್ದ ಕೆಲ ಪ್ರಮುಖ ನಿರ್ಧಾರಗಳು ಕಾರಣ. ಆದರೆ ಆ ನಿರ್ಧಾರಗಳು ತಮ್ಮದೆಂದು ಕೆಲವರು ಹೇಳಿಕೊಂಡಿದ್ದಾರೆ. ಗೆಲುವಿನ ಶ್ರೇಯಸ್ಸು ತಮಗೇ ಸೇರಬೇಕು ಎಂದು ಸ್ವಯಂ ಪ್ರಚಾರ ಮಾಡಿಕೊಂಡಿದ್ದಾರೆ. ನನ್ನ ನಿರ್ಧಾರಗಳ ಬಗ್ಗೆ ನನಗೆ ಗೊತ್ತಿತ್ತು. ಆದರೆ ಬೇರೆ ಯಾರೋ ಪ್ರಚಾರ ಪಡೆಯುತ್ತಿರುವುದು ನೋಡಿ ನಗು ಬಂತು’ ಎಂದು ಹೇಳಿದ್ದಾರೆ. ರಹಾನೆ ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ ಸರಣಿ ಗೆಲುವಿನ ಬಳಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಮಾತನಾಡಿದ್ದ ಶಾಸ್ತ್ರಿ ಅವರನ್ನು ಉದ್ದೇಶಿಸಿಯೇ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳ ನಡುವಿನ 2020-21ನೇ ಸಾಲಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 36 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ವೈಯುಕ್ತಿಕ ಕಾರಣ ನೀಡಿ ತವರಿಗೆ ವಾಪಸ್ಸಾಗಿದ್ದರು. ಇದಾದ ಬಳಿಕ ನಾಯಕನಾಗಿ ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಅಜಿಂಕ್ಯ ರಹಾನೆ ಭಾರತಕ್ಕೆ 2-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಕೊಟ್ಟಿದ್ದರು. 

ಮೆಲ್ಬೊರ್ನ್ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ರಹಾನೆ, ಎರಡನೇ ಪಂದ್ಯದಲ್ಲೇ ಗೆಲುವಿನ ಹಳಿಗೆ ತಂಡವನ್ನು ಮರಳುವಂತೆ ಮಾಡಿದ್ದರು. ಇದಾದ ಬಳಿಕ ಸಿಡ್ನಿ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಬ್ರಿಸ್ಬೇನ್‌ನ ಗಾಬಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಭೂತಪೂರ್ವ ಗೆಲುವು ದಾಖಲಿಸುವ ಮೂಲಕ ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಕೈಕ ತಂಡ ಎನ್ನುವ ಕೀರ್ತಿಗೆ ಭಾರತ ಕ್ರಿಕೆಟ್ ತಂಡವು ಪಾತ್ರವಾಯಿತು. 

Ind vs SL: ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕೆ ಮೊಹಾಲಿ ಆತಿಥ್ಯ..!

ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡು ಮಾನಸಿಕವಾಗಿ ಕುಸಿದಿದ್ದ ಟೀಂ ಇಂಡಿಯಾ ಆ ಬಳಿಕ ಪುಟಿದೆದ್ದ ರೀತಿಗೆ ಕ್ರಿಕೆಟ್‌ ಪಂಡಿತರು ಅಜಿಂಕ್ಯ ರಹಾನೆಯವರ ನಾಯಕತ್ವದ ತೀರ್ಮಾನಗಳಿಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ ಇದಾದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾ ಬಂದಿರುವ ರಹಾನೆ ಇದೀಗ ಟೆಸ್ಟ್ ತಂಡದಿಂದಲೇ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ.

ನನ್ನ ಆಟ ಮುಗಿದಿಲ್ಲ: ಲಯ ಕಳೆದುಕೊಂಡು ಟೀಕೆಗೆ ಗುರಿಯಾಗಿರುವ ರಹಾನೆ ಪುಟಿದೇಳುವ ಭರವಸೆ ವ್ಯಕ್ತಪಡಿಸಿದ್ದಾರೆ. ‘ನನ್ನ ಕ್ರಿಕೆಟ್‌ ಬದುಕು ಮುಗಿಯಿತು ಎಂದು ಕೆಲವರು ಟೀಕಿಸುತ್ತಾರೆ. ಆದರೆ ಕ್ರಿಕೆಟ್‌ ಬಗ್ಗೆ ತಿಳಿದವರು ಹಾಗೆ ಹೇಳುವುದಿಲ್ಲ. ನನ್ನ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆಯಿದೆ. ಈಗಲೂ ನನ್ನ ಆಟ ಉತ್ತಮವಾಗಿದೆ ಮತ್ತು ನನ್ನಲ್ಲಿ ಇನ್ನೂ ಕ್ರಿಕೆಟ್‌ ಬಾಕಿ ಇದೆ’ ಎಂದು ರಹಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಂಕಾ ಟೆಸ್ಟ್‌ ಸರಣಿಗೆ 4 ಹಿರಿಯರಿಗೆ ಕೊಕ್‌?

ನವದೆಹಲಿ: ಮುಂಬರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ತಂಡದಿಂದ ನಾಲ್ವರು ಹಿರಿಯ ಆಟಗಾರರನ್ನು ಹೊರಗಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಜಿಂಕ್ಯ ರಹಾನೆ, ಚೇತೇಶ್ವರ್‌ ಪೂಜಾರ, ವೃದ್ಧಿಮಾನ್‌ ಸಾಹ ಹಾಗೂ ಇಶಾಂತ್‌ ಶರ್ಮಾ ತಂಡಕ್ಕೆ ಆಯ್ಕೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಪೈಕಿ ಇಶಾಂತ್‌ ಶರ್ಮಾ (Ishant Sharma) ಹಾಗೂ ಸಾಹ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗಿದ್ದರೂ ಒಂದೂ ಪಂದ್ಯದಲ್ಲಿ ಆಡಿರಲಿಲ್ಲ. ಈಗ ರಣಜಿ ಟ್ರೋಫಿಯಿಂದಲೂ ಹೊರಗುಳಿಯಲು ನಿರ್ಧರಿಸಿದ್ದು ಕುತೂಹಲ ಮೂಡಿಸಿದೆ. ಇನ್ನು, ಕಳಪೆ ಲಯದಿಂದಾಗಿ ಟೀಕೆಗೆ ಗುರಿಯಾಗಿರುವ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ರಣಜಿ ಟ್ರೋಫಿಯಲ್ಲಿ ಆಡಲು ನಿರ್ಧರಿಸಿದ್ದಾರೆ.
 

Follow Us:
Download App:
  • android
  • ios