* ಭಾರತ-ಶ್ರೀಲಂಕಾ ನಡುವಿನ ಸರಣಿಯ ವೇಳಾಪಟ್ಟಿ ಬದಲು* ಮೊದಲಿಗೆ ಟಿ20 ಸರಣಿ, ಇದಾದ ಬಳಿಕ ಟೆಸ್ಟ್ ಸರಣಿ ಆಯೋಜನೆ* ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕೆ ಮೊಹಾಲಿ ಆತಿಥ್ಯ
ಬೆಂಗಳೂರು(ಫೆ.08): ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿಯವರ (Virat Kohli) 100ನೇ ಟೆಸ್ಟ್ ಪಂದ್ಯಕ್ಕೆ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೊಹಾಲಿ ಕ್ರೀಡಾಂಗಣ ಆತಿಥ್ಯವನ್ನು ವಹಿಸುವುದು ಖಚಿತವಾಗಿದೆ. ಈ ಮೊದಲು ವಿರಾಟ್ ಕೊಹ್ಲಿಯ ಎರಡನೇ ತವರು ಮೈದಾನ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಕಿಂಗ್ ಕೊಹ್ಲಿ ತಮ್ಮ 100ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ ಎಂದು ವರದಿಯಾಗಿತ್ತು. ಶ್ರೀಲಂಕಾ ಎದುರಿನ ಸರಣಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿವೆ. ವಿರಾಟ್ ಕೊಹ್ಲಿ ಕಳೆದ 14 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಹೀಗಾಗಿ, ವಿರಾಟ್ ಕೊಹ್ಲಿಯವರ ನೂರನೇ ಟೆಸ್ಟ್ ಪಂದ್ಯವನ್ನು ಬಿಸಿಸಿಐ (BCCI) ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆಯೋಜಿಸಲಿದೆ ಎಂದು ವರದಿಯಾಗಿತ್ತು.
ಈ ಮೊದಲು ಭಾರತ ತಂಡವು ಶ್ರೀಲಂಕಾ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ ಎಂದು ವೇಳಾಪಟ್ಟಿ ಪ್ರಕಟಗೊಂಡಿತ್ತು. ಇದೀಗ ಈ ವೇಳಾಪಟ್ಟಿ ಸಂಪೂರ್ಣ ತಲೆಕೆಳಗಾಗಿದೆ. ಇದೀಗ ಲಂಕಾ ಎದುರು ಮೊದಲಿಗೆ ಟಿ20 ಸರಣಿ ಆರಂಭವಾಗಲಿದ್ದು, ಕೊನೆಯಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಜರುಗಲಿದೆ. ಫೆಬ್ರವರಿ 24ರಂದು ಲಖನೌದಲ್ಲಿ ಮೊದಲ ಟಿ20 ಪಂದ್ಯವು ನಡೆಯಲಿದೆ. ಇದಾದ ಬಳಿಕ ಫೆಬ್ರವರಿ 26 ಹಾಗೂ ಫೆಬ್ರವರಿ 27ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಉತ್ತರಪ್ರದೇಶ ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಗಳು ಈ ವಿಚಾರವನ್ನು ಖಚಿತಪಡಿಸಿವೆ.
ಧರ್ಮಶಾಲಾದಲ್ಲಿ ಟಿ20 ಸರಣಿಯನ್ನು ಮುಗಿಸಿಕೊಂಡ ಬಳಿಕ ಉಭಯ ತಂಡಗಳು ಮೊಹಾಲಿಗೆ ಬಂದಿಳಿಯಲಿವೆ. ಮಾರ್ಚ್ 03ರಿಂದ 07ರ ವರೆಗೆ ಮೊದಲ ಟೆಸ್ಟ್ ಪಂದ್ಯವನ್ನಾಡಲಿವೆ. ಈ ಪಂದ್ಯವು ವಿರಾಟ್ ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯವಾಗಲಿದೆ. ಇನ್ನು ಮಾರ್ಚ್ 12ರಿಂದ 16ರ ವರೆಗೆ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿರಲಿದೆ.
ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯವಾಗಿರಲಿದೆಯೇ ಎನ್ನುವುದರ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಎರಡನೇ ಟೆಸ್ಟ್ ಪಂದ್ಯವು ಮಾರ್ಚ್ 12ರಿಂದ 16ರ ವರೆಗೆ ನಡೆಯಲಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
Ind vs SL: ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ, ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಆತಿಥ್ಯ..!
ಭಾರತ ಪ್ರವಾಸಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Cricket) ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಫೆಬ್ರವರಿ 11ರಿಂದ 20ರ ವರೆಗೆ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ಎದುರು 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇದಾದ ಬಳಿಕ ಆಸ್ಟ್ರೇಲಿಯಾದಿಂದ ನೇರವಾಗಿ ಭಾರತದಲ್ಲಿನ ಬಯೋ ಬಬಲ್‌ನೊಳಗೆ ಸೇರ್ಪಡೆಯಾಗಲು ಲಂಕಾ ಆಟಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಟಿ20 ಸರಣಿಯನ್ನು ಮೊದಲು ಆಯೋಜಿಸಲು ಲಂಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಮನವಿ ಮಾಡಿತ್ತು. ಈ ಕಾರಣಕ್ಕಾಗಿಯೇ ಬಿಸಿಸಿಐ ವೇಳಾಪಟ್ಟಿ ಬದಲಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ.
ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿರುವುದರಿಂದ, ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಚೇತನ್ ಶರ್ಮಾ ನೇತೃತ್ವದ ಭಾರತ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡುವ ವೇಳೆಯಲ್ಲಿಯೇ ಟೀಂ ಇಂಡಿಯಾ ಟೆಸ್ಟ್ ನಾಯಕರನ್ನು ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ.
