ನವದೆಹಲಿ(ಮಾ.23): ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ-ಪ್ರಿಯಾಂಕಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ರೈನಾ ಪತ್ನಿ ಪ್ರಿಯಾಂಕಾ ಸೋಮವಾರ(ಮಾ.23) ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ. 

ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ಮ್ಯಾಚ್ ಫಿನಿಶರ್‌ಗಳು..!

ರೈನಾ ದಂಪತಿಗೆ ಈಗಾಗಲೇ ಗ್ರೇಸಿಯಾ ಎನ್ನುವ ಮುದ್ದಾದ ಮಗಳಿದ್ದಾಳೆ. ರೈನಾ ಗಂಡು ಮಗುವಿಗೆ ತಂದೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

ಖ್ಯಾತ ಕ್ರೀಡಾ ಪತ್ರಕರ್ತ ಬೋರಿಯ ಮಜುಂದಾರ್ ಈ ಕುರಿತಂತೆ, 'ತಂದೆಯಾಗಿರುವುದಕ್ಕೆ ರೈನಾಗೆ ಅಭಿನಂದನೆಗಳು. ದೇವರ ದಯೆಯಿಂದ ತಾಯಿ ಹಾಗೂ ಮಗು ಆರೋಗ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಕೊರೋನಾ ವೈರಸ್ ಎನ್ನುವ ಪಿಡುಗಿನಿಂದ ಕಂಗಾಲಾಗಿರುವ ಸುರೇಶ್ ರೈನಾ ಹಾಗೂ ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಂತಾಗಿದೆ. ಕೊರೋನಾ ಭೀತಿಯಿಂದಾಗಿ ಬಿಸಿಸಿಐ ದೇಶದ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಬಂದ್ ಮಾಡಿದೆ. ಇನ್ನು ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಎನಿಸಿರುವ ಸುರೇಶ್ ರೈನಾ ತಂದೆಯಾಗುತ್ತಿದ್ದಂತೆ ಸಿಎಸ್‌ಕೆ ತನ್ನ ಟ್ವಿಟರ್ ಖಾತೆಯಿಂದ ಶುಭಕೋರಿದೆ.

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಕನವರಿಕೆಯಲ್ಲಿ ರೈನಾ:
2018ರಲ್ಲಿ ಕಡೆಯ ಬಾರಿಗೆ ಟಿ20 ಪರ ಕಣಕ್ಕಿಳಿದಿದ್ದ ರೈನಾ, 2020ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸುವ ಲೆಕ್ಕಾಚಾರದಲ್ಲಿದ್ದಾರೆ.  
 

ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ