* ಇಂಗ್ಲೆಂಡ್ ಸರಣಿಗೆ ಸಜ್ಜಾಗಲು ವಿರಾಟ್ ಕೊಹ್ಲಿ ಪಡೆ ಕಣ್ಣು* ಇಂಗ್ಲೆಂಡ್ ಎದುರಿನ ಸರಣಿಗೂ ಮುನ್ನ ಅಭ್ಯಾಸ ಪಂದ್ಯವಾಡಲಿರುವ ಭಾರತ* 3 ದಿನಗಳ ಅಭ್ಯಾಸ ಪಂದ್ಯವನ್ನಾಡಲಿರುವ ಟೀಂ ಇಂಡಿಯಾ

ಲಂಡನ್(ಜು.03)‌: ಇಂಗ್ಲೆಂಡ್‌ ವಿರುದ್ಧದ 5 ಟೆಸ್ಟ್‌ಗಳ ಸರಣಿ ಆರಂಭಕ್ಕೂ ಮೊದಲು ಭಾರತ ತಂಡ ಸ್ಥಳೀಯ ಕೌಂಟಿ ತಂಡದ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ. ಜುಲೈ 20-22ರ ವರೆಗೂ ಪಂದ್ಯ ನಡೆಯುಲಿದೆ ಎಂದು ಮೂಲಗಳು ತಿಳಿಸಿವೆ. 

ಬಯೋ ಬಬಲ್‌ ನಿರ್ವಹಣೆ ಹಾಗೂ ‘ದಿ ಹಂಡ್ರೆಡ್‌’ ಟೂರ್ನಿಯ ನೆಪ ಹೇಳಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಅಭ್ಯಾಸ ಪಂದ್ಯಕ್ಕೆ ತಂಡವನ್ನು ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಮತ್ತೊಮ್ಮೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವು ಕೌಂಟಿಗಳ ಆಟಗಾರರನ್ನು ಸೇರಿಸಿ ತಂಡವೊಂದನ್ನು ರಚಿಸಲು ಇಸಿಬಿ ಒಪ್ಪಿಗೆ ನೀಡಿದ್ದು, ಡರ್ಹಮ್‌ನಲ್ಲಿ 3 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಬಯೋ ಬಬಲ್‌ ತೊರೆದು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ರಜಾ ದಿನಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಜುಲೈ 15ರಂದು ಆಟಗಾರರು ಅಭ್ಯಾಸ ಶಿಬಿರಕ್ಕೆ ಹಾಜರಾಗಲಿದ್ದಾರೆ. ಜುಲೈ 15ರಿಂದ ಆಗಸ್ಟ್ 01ರವರೆಗೆ ಡರ್ಹಮ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಅಭ್ಯಾಸ ನಡೆಸಲಿದೆ. ಇದಾದ ಬಳಿಕ ಆಗಸ್ಟ್ 04ರಿಂದ ಆರಂಭವಾಗಲಿರುವ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ನತ್ತ ಮುಖ ಮಾಡಲಿದೆ.

ಲಂಕಾದಲ್ಲಿ ಅಭ್ಯಾಸ ಆರಂಭಿಸಿದ ಧವನ್‌ ಪಡೆ

ನ್ಯೂಜಿಲೆಂಡ್ ಎದುರು ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಸರಣಿಗೂ ಮುನ್ನ ಸ್ಥಳೀಯ ತಂಡದೊಂದಿಗೆ ಅಭ್ಯಾಸ ಪಂದ್ಯವನ್ನಾಡುವ ಇಂಗಿತ ವ್ಯಕ್ತಪಡಿಸಿದ್ದರು.