ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾಅಜೇಯ 44 ರನ್ ಬಾರಿಸಿ ಭಾರತಕ್ಕೆ ಆಸರೆಯಾದ ಜಡ್ಡು4 ವಿಕೆಟ್ ಕಬಳಿಸಿ ಮಿಂಚಿದ ಕ್ರಿಸ್ ಜೋರ್ಡನ್
ಬರ್ಮಿಂಗ್‌ಹ್ಯಾಮ್(ಜು.09): ಮಧ್ಯಮ ಕ್ರಮಾಂಕದ ವೈಫಲ್ಯದ ಹೊರತಾಗಿತೂ ರವೀಂದ್ರ ಜಡೇಜಾ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿದ್ದು, ಆತಿಥೇಯ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದೆ. ರವೀಂದ್ರ ಜಡೇಜಾ ಕೇವಲ 29 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
ಇಲ್ಲಿನ ಎಜ್‌ಬಾಸ್ಟನ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ (Team India) ಭರ್ಜರಿ ಆರಂಭವನ್ನೇ ಪಡೆಯಿತು. ನಾಯಕ ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಿದ ರಿಷಭ್ ಪಂತ್ ಭಾರತ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಕೇವಲ 4.5 ಓವರ್‌ನಲ್ಲಿ ಈ ಜೋಡಿ 49 ರನ್‌ಗಳ ಜತೆಯಾಟ ನಿಭಾಯಿಸಿತು. ಒಂದು ರನ್ ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಸದುಪಯೋಗ ಪಡಿಸಿಕೊಂಡ ನಾಯಕ ರೋಹಿತ್ ಶರ್ಮಾ ಕೇವಲ 20 ಎಸೆತಗಳಲ್ಲಿ ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಬಾರಿಸಿ ರಿಚರ್ಡ್ ಗ್ಲೀಸನ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಪಂತ್ ಕೂಡಾ 15 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 26 ರನ್ ಬಾರಿಸಿ ಗ್ಲೀಸನ್‌ಗೆ ಎರಡನೇ ಬಲಿಯಾದರು.
ಕೈಕೊಟ್ಟ ಮಧ್ಯಮ ಕ್ರಮಾಂಕ: ಇಶಾನ್ ಕಿಶನ್ ವಿಕೆಟ್ ಪತನವಾಗುತ್ತಿದ್ದಂತೆಯೇ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಜವಾಬ್ದಾರಿಯುತ ಪ್ರದರ್ಶನ ತೋರಲು ವಿಫಲರಾದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಮುಂದುವರೆಯಿತು. ಕೊಹ್ಲಿ ಮೂರು ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್ ಗಳಿಸಿ ಗ್ಲೀಸನ್‌ಗೆ ಮೂರನೇ ಬಲಿಯಾದರು. ಇನ್ನು ಸೂರ್ಯಕುಮಾರ್ ಯಾದವ್(15), ಹಾರ್ದಿಕ್ ಪಾಂಡ್ಯ(12) ಹಾಗೂ ದಿನೇಶ್ ಕಾರ್ತಿಕ್(12) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಇಂದು ಇಂಗ್ಲೆಂಡ್ ವಿರುದ್ಧ 2ನೇ ಟಿ20, ಸರಣಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ
ಮತ್ತೆ ಟೀಂ ಇಂಡಿಯಾಗೆ ಆಸರೆಯಾದ ಜಡೇಜಾ: ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ್ದ ರವೀಂದ್ರ ಜಡೇಜಾ, ಇದೀಗ ಟಿ20 ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಜಡೇಜಾ 29 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಅಜೇಯ 46 ರನ್ ಬಾರಿಸಿದರು. ಜಡೇಜಾಗೆ ಕೊನೆಯಲ್ಲಿ ಸಾಥ್ ನೀಡಿದ ಹರ್ಷಲ್ ಪಟೇಲ್ ಕೇವಲ 6 ಎಸೆತಗಳಲ್ಲಿ 13 ರನ್ ಬಾರಿಸಿದರು.
ಗ್ಲೀಸನ್‌ಗೆ 3, ಜೋರ್ಡನ್‌ಗೆ 4 ವಿಕೆಟ್: ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಬಲಗೈ ವೇಗಿ ರಿಚರ್ಡ್ ಗ್ಲೀಸನ್ ಚೊಚ್ಚಲ ಪಂದ್ಯದಲ್ಲೇ ಟೀಂ ಇಂಡಿಯಾದ ಅಗ್ರಕ್ರಮಾಂಕದ ಮೂರು ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು. ಇನ್ನು ಅನುಭವಿ ವೇಗಿ ಕ್ರಿಸ್ ಜೋರ್ಡನ್ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.
