Asianet Suvarna News Asianet Suvarna News

ಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಪಡಿಕ್ಕಲ್‌ ಸೇರಿ ಮೂವರು ಕನ್ನಡಿಗರಿಗೆ ಸ್ಥಾನ

* ಶ್ರೀಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ

* ಪಡಿಕ್ಕಲ್‌ ಸೇರಿದಂತೆ ಮೂವರು ಕನ್ನಡಿಗರಿಗೆ ಲಂಕಾ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ

* ಕಮ್‌ಬ್ಯಾಕ್‌ ಕನಸು ಕಾಣುತ್ತಿದ್ದ ದಿನೇಶ್ ಕಾರ್ತಿಕ್‌ಗೆ ಶಾಕ್ ನೀಡಿದ ಆಯ್ಕೆ ಸಮಿತಿ

Team India Squad Announces for Sri Lanka Tour Maiden Call ups for Devdutt Padikkal Chetan Sakariya kvn
Author
Mumbai, First Published Jun 11, 2021, 8:46 AM IST

ಮುಂಬೈ(ಜೂ.11): ಶ್ರೀಲಂಕಾ ವಿರುದ್ದ ಜುಲೈನಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಏಕದಿನ ಸರಣಿಗೆ ಭಾರತ ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ನಿರೀಕ್ಷೆಯಂತೆಯೇ ದೇವದತ್ ಪಡಿಕ್ಕಲ್‌ ಸೇರಿದಂತೆ ಮೂವರು ಕನ್ನಡಿಗರು ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸದಲ್ಲಿದ್ದು ಟೆಸ್ಟ್‌ ಸರಣಿಗೆ ಸಿದ್ದತೆ ನಡೆಸುತ್ತಿದೆ. ಹೀಗಾಗಿ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದ್ದು, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಲಂಕಾ ಎದುರಿನ 3 ಪಂದ್ಯಗಳ ಏಕದಿನ ಸರಣಿಯು ಜುಲೈ 13ರಿಂದ ಆರಂಭವಾಗಲಿದ್ದು, ಇನ್ನುಳಿದ ಎರಡು ಏಕದಿನ ಪಂದ್ಯಗಳು ಜುಲೈ 16 ಹಾಗೂ 18ರಂದು ನಡೆಯಲಿವೆ. ಇನ್ನು 3 ಪಂದ್ಯಗಳ ಟಿ20 ಸರಣಿಯು ಕ್ರಮವಾಗಿ ಜುಲೈ 21, 23 ಹಾಗೂ 25ರಂದು ನಡೆಯಲಿವೆ. ಈ ಎಲ್ಲಾ ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಧವನ್ ನೇತೃತ್ವದ ಟೀಂ ಇಂಡಿಯಾ ಜೂನ್‌ 28ರಂದು ಶ್ರೀಲಂಕಾಗೆ ಬಂದಿಳಿಯಲಿದೆ.

ಹೊಸ ಮುಖಗಳಿಗೆ ರಾಷ್ಟ್ರೀಯ ತಂಡದಲ್ಲಿ ಮೊದಲ ಬಾರಿಗೆ ಅವಕಾಶ: ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌, ಕೃಷ್ಣಪ್ಪ ಗೌತಮ್‌, ಋತುರಾಜ್ ಗಾಯಕ್ವಾಡ್‌, ನಿತೀಶ್ ರಾಣಾ, ವೇಗಿ ಚೇತನ್ ಸಕಾರಿಯಾ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗೌತಮ್‌ ದೇಶಿ ಟೂರ್ನಿಯಲ್ಲಿ ಮಿಂಚಿದ್ದರೆ, ಉಳಿದೆಲ್ಲಾ ಆಟಗಾರರು ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿ ಆಯ್ಕೆ ಸಮಿತಿ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಡೋ-ಲಂಕಾ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ ಪ್ರಕಟ..!

ಅನುಭವಿಗಳಿಗೂ ಮಣೆ: ಕರ್ನಾಟಕದ ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್‌, ಪೃಥ್ವಿ ಶಾಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಮಾಂತ್ರಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಅಯ್ಕೆಯಾಗಿದ್ದರಾದರೂ, ಫಿಟ್‌ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇದೀಗ ಮತ್ತೆ ಲಂಕಾ ಸರಣಿಗೆ ಆಯ್ಕೆಯಾಗಿದ್ದಾರೆ.

ದಿನೇಶ್ ಕಾರ್ತಿಕ್‌ಗೆ ಶಾಕ್‌: ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದ ಅನುಭವಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ಶಾಕ್‌ ನೀಡಿದೆ. ಇನ್ನು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್‌ ಅಯ್ಯರ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಲಂಕಾ ಸರಣಿಗೆ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಬಿಸಿಸಿಐ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಲಂಕಾ ಪ್ರವಾಸಕ್ಕೆ ಭಾರತ ತಂಡ ಹೀಗಿದೆ ನೋಡಿ:

ಶಿಖರ್ ಧವನ್(ನಾಯಕ), ಭುವನೇಶ್ವರ್ ಕುಮಾರ್(ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್‌, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಯುಜುವೇಂದ್ರ ಚಹಲ್, ರಾಹುಲ್ ಚಹಾರ್, ಕೆ. ಗೌತಮ್, ಕೃನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹಾರ್, ನವದೀಪ್ ಸೈನಿ, ಚೇತನ್ ಸಕಾರಿಯಾ.

Follow Us:
Download App:
  • android
  • ios