ಏಕದಿನ ವಿಶ್ವಕಪ್ ಪಂದ್ಯ ಬೆಳಗ್ಗೆ 11.30ಕ್ಕೆ ಆರಂಭಿಸಿ: ರವಿಚಂದ್ರನ್ ಅಶ್ವಿನ್ ಮಹತ್ವದ ಸಲಹೆ
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಇಬ್ಬನಿಯಿಂದ ಸಮಸ್ಯೆಯಾಗುವುದನ್ನು ತಡೆಗಟ್ಟಲು ಮಹತ್ವದ ಸಲಹೆ ನೀಡಿದ ಅಶ್ವಿನ್
ಮಧ್ಯಾಹ್ನ 1.30ರ ಬದಲು ಬೆಳಗ್ಗೆ 11.30ಕ್ಕೆ ಆರಂಭಿಸಲು ಅಶ್ವಿನ್ ಐಡಿಯಾ
ನವದೆಹಲಿ(ಡಿ): ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳನ್ನು ಮಧ್ಯಾಹ್ನ 1.30ರ ಬದಲು ಬೆಳಗ್ಗೆ 11.30ಕ್ಕೆ ಆರಂಭಿಸಬೇಕು. ಆ ಮೂಲಕ 2ನೇ ಇನ್ನಿಂಗ್ಸಲ್ಲಿ ಬೌಲ್ ಮಾಡುವ ತಂಡಕ್ಕೆ ಇಬ್ಬನಿಯಿಂದ ಸಮಸ್ಯೆಯಾಗುವುದನ್ನು ತಡೆಗಟ್ಟಬಹುದು ಎಂದು ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಅಭಿಪ್ರಾಯಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಸಂಜೆಯ ಮೇಲೆ ಇಬ್ಬನಿ ಬೀಳುವ ಕಾರಣ ಬೌಲ್ ಮಾಡುವ ತಂಡಕ್ಕೆ ಹಿನ್ನಡೆಯಾಗಲಿದೆ. ನಿಧಾನಗತಿಯ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತ ಕಲೆಹಾಕಿದರೂ ಇಬ್ಬನಿಯ ಕಾರಣದಿಂದಾಗಿ ಬೌಲ್ ಮಾಡುವಾಗ ಹಿನ್ನಡೆ ಎದುರಿಸಬೇಕು. ಇದನ್ನು ತಪ್ಪಿಸಲು ಬೆಳಗ್ಗೆ 11.30ಕ್ಕೆ ಪಂದ್ಯ ಆರಂಭಿಸಿದರೆ, ಇಬ್ಬನಿ ಬೀಳುವ ಹೊತ್ತಿಗೆ ಪಂದ್ಯ ಮುಗಿಯಲಿದೆ. ಇದರಿಂದ ಎರಡೂ ತಂಡಕ್ಕೆ ಅನಗತ್ಯ ಲಾಭವಾಗುವುದನ್ನು ತಪ್ಪಿಸಬಹುದು’ ಎಂದು ಅಶ್ವಿನ್ ಹೇಳಿದ್ದಾರೆ.
18 ತಿಂಗಳು ಪಂತ್ ಕ್ರಿಕೆಟ್‌ನಿಂದ ದೂರ?
ನವದೆಹಲಿ: ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 6 ವಾರಗಳ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಮಾಧ್ಯಮವೊಂದರ ವರದಿ ಪ್ರಕಾರ ಪಂತ್ ಕ್ರಿಕೆಟ್‌ಗೆ ಮರಳಲು ಕನಿಷ್ಠ 18 ತಿಂಗಳು ಅಂದರೆ ಒಂದೂವರೆ ವರ್ಷವಾಗಲಿದೆ ಎನ್ನಲಾಗಿದೆ. ಪಂತ್ ಈ ವರ್ಷದ ಐಪಿಎಲ್, ಏಕದಿನ ವಿಶ್ವಕಪ್ ಮಾತ್ರವಲ್ಲ 2024ರ ಐಪಿಎಲ್ ಹಾಗೂ ಟಿ20 ವಿಶ್ವಕಪ್‌ಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಫಿಟ್ನೆಸ್ ಸಾಬೀತಿಗೆ ರಣಜಿ ಪಂದ್ಯ ಆಡಲಿರುವ ಜಡೇಜಾ
ನವದೆಹಲಿ: ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಆಸ್ಪ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಫಿಟ್ನೆಸ್ ಸಾಬೀತು ಪಡಿಸಲು ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ. ಜನವರಿ 24ರಿಂದ ಚೆನ್ನೈನಲ್ಲಿ ತಮಿಳುನಾಡು ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಡೇಜಾ ಸೌರಾಷ್ಟ್ರ ಪರ ಕಣಕ್ಕಿಳಿಯಲಿದ್ದಾರೆ.
ಏಕದಿನ ಗರಿಷ್ಠ ರನ್: ಟಾಪ್-5ಗೆ ವಿರಾಟ್ ಕೊಹ್ಲಿ ಲಗ್ಗೆ! ಜನವರಿ 15 ಸ್ಮರಣೀಯವಾಗಿಸಿಕೊಂಡ King Kohli
ಆಸೀಸ್ ವಿರುದ್ಧ ಮೊದಲೆರಡು ಟೆಸ್ಟ್‌ಗೆ ಜಡೇಜಾ ಆಯ್ಕೆಯಾಗಿದ್ದಾರಾದರೂ ಫಿಟ್ನೆಸ್ ಸಾಬೀತು ಪಡಿಸಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿದೆ. ಕಳೆದ ವರ್ಷ ಆಗಸ್ಟ್ 31ರಂದು ಹಾಂಕಾಂಗ್ ವಿರುದ್ಧದ ಏಷ್ಯಾಕಪ್ ಪಂದ್ಯದ ಬಳಿಕ ಜಡೇಜಾ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಬಲಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಟಿ20 ವಿಶ್ವಕಪ್: ಭಾರತಕ್ಕೆ ಇಂದು ಯುಎಇ ಸವಾಲು
ಬೆನೊನಿ: ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೋಮವಾರ ಭಾರತ ತಂಡಕ್ಕೆ ಯುಎಇ ಸವಾಲು ಎದುರಾಗಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದಿದ್ದ ಶಫಾಲಿ ವರ್ಮಾ ಪಡೆ, ಈ ಪಂದ್ಯವನ್ನೂ ಗೆದ್ದು ಸೂಪರ್ 6 ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಯುಎಇ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು. ಭಾರತಕ್ಕೂ ಕಠಿಣ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.
ಪಂದ್ಯ: ಮಧ್ಯಾಹ್ನ 1.30ರಿಂದ
ಪ್ರಸಾರ: ಫ್ಯಾನ್ ಕೋಡ್ ಅ್ಯಪ್