ಏಕದಿನ ಗರಿಷ್ಠ ರನ್: ಟಾಪ್-5ಗೆ ವಿರಾಟ್ ಕೊಹ್ಲಿ ಲಗ್ಗೆ! ಜನವರಿ 15 ಸ್ಮರಣೀಯವಾಗಿಸಿಕೊಂಡ King Kohli
ಲಂಕಾ ಎದುರು ಮೂರನೇ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ ವಿರಾಟ್ ಕೊಹ್ಲಿ
ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಪಟ್ಟಿಯಲ್ಲಿ ಕೊಹ್ಲಿಗೆ 5ನೇ ಸ್ಥಾನ
ಲಂಕಾ ಎದುರಿನ ಪಂದ್ಯದಲ್ಲಿ ಜಯವರ್ಧನೆ ದಾಖಲೆ ಹಿಂದಿಕ್ಕಿದ ಕಿಂಗ್ ಕೊಹ್ಲಿ
ತಿರುವನಂತಪುರಂ(ಡಿ.16): ಕಳೆದ 4 ಇನ್ನಿಂಗ್ಸಲ್ಲಿ 3 ಶತಕ ಸಿಡಿಸುವ ಮೂಲಕ ಭಾರತದ ‘ರನ್ ಮಷಿನ್’ ವಿರಾಟ್ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ವಿಶ್ವಕಪ್ ವರ್ಷದಲ್ಲಿ ಕೊಹ್ಲಿಯ ಲಯ ಭಾರತದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಲಂಕಾ ವಿರುದ್ಧದ 3ನೇ ಏಕದಿನದಲ್ಲಿ ಕೊಹ್ಲಿ ಮತ್ತಷ್ಟುಮಹತ್ವದ ದಾಖಲೆಗಳನ್ನು ಬರೆದರು.
ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಲಂಕಾದ ಮಹೇಲಾ ಜಯವರ್ಧನೆ(12650)ಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದರು. ಕೊಹ್ಲಿ 268 ಪಂದ್ಯಗಳ 259 ಇನ್ನಿಂಗ್ಸ್‌ಗಳಲ್ಲಿ 12754 ರನ್ ಕಲೆಹಾಕಿದ್ದಾರೆ. ಸಚಿನ್ ತೆಂಡುಲ್ಕರ್ (18426), ಕುಮಾರ ಸಂಗಕ್ಕರ (14234), ರಿಕಿ ಪಾಂಟಿಂಗ್(13704), ಸನತ್ ಜಯಸೂರ್ಯ(13430) ಮೊದಲ 4 ಸ್ಥಾನಗಳಲ್ಲಿದ್ದಾರೆ.
46ನೇ ಶತಕ: ಏಕದಿನ ಕ್ರಿಕೆಟಲ್ಲಿ ಕೊಹ್ಲಿ 46 ಶತಕ ಪೂರೈಸಿದ್ದು, ಸಚಿನ್ ತೆಂಡುಲ್ಕರ್‌ರ 49 ಶತಕಗಳ ದಾಖಲೆ ಮುರಿಯಲು ಇನ್ನು ಕೇವಲ 4 ಶತಕಗಳಷ್ಟೇ ಬೇಕಿದೆ. ಅಂ.ರಾ. ಕ್ರಿಕೆಟಲ್ಲಿ 74 ಶತಕಕ್ಕೆ ತಲುಪಿರುವ ವಿರಾಟ್, ಸಚಿನ್‌ರ 100 ಶತಕಗಳ ದಾಖಲೆ ಮೇಲೂ ಕಣ್ಣಿಟ್ಟಿದ್ದಾರೆ.
ತಂಡವೊಂದರ ವಿರುದ್ಧ 10 ಶತಕ: ಮೊದಲಿಗ!
ತಿರುವನಂತಪುರಂನಲ್ಲಿ ದಾಖಲಾದ ಶತಕ ಶ್ರೀಲಂಕಾ ವಿರುದ್ಧ ಕೊಹ್ಲಿಯ 10ನೇ ಏಕದಿನ ಶತಕ. ತಂಡವೊಂದರ ವಿರುದ್ಧ ಏಕದಿನದಲ್ಲಿ 10 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿಯೇ ವಿಂಡೀಸ್ ವಿರುದ್ಧ 9 ಶತಕ ಹೊಡೆದಿದ್ದು, ಆಸೀಸ್ ವಿರುದ್ಧ ಸಚಿನ್ 9 ಶತಕ ಗಳಿಸಿದ್ದಾರೆ.
ತವರಲ್ಲಿ 21 ಶತಕ: ಕೊಹ್ಲಿ ಹೊಸ ದಾಖಲೆ!
ತವರಿನಲ್ಲಿ ವಿರಾಟ್ ಏಕದಿನದಲ್ಲಿ 21 ಶತಕ ಬಾರಿಸಿದ್ದು, ಸಚಿನ್ ತೆಂಡುಲ್ಕರ್‌ರ ದಾಖಲೆ ಮುರಿದಿದ್ದಾರೆ. ಸಚಿನ್ ತವರಲ್ಲಿ 20 ಶತಕ ಸಿಡಿಸಿದ್ದರು. ಅಲ್ಲದೇ ಕೊಹ್ಲಿ ಶತಕ ಬಾರಿಸಿದಾಗ ಭಾರತ 38 ಬಾರಿ ಗೆದ್ದಿದೆ. ಇದೂ ಸಹ ದಾಖಲೆ ಎನಿಸಿದೆ.
ಜನವರಿ 15 ನೆಚ್ಚಿನ ದಿನ
ವಿರಾಟ್ ಪಾಲಿಗೆ ಜ.15 ನೆಚ್ಚಿನ ದಿನ. ಅವರು 2017, 2018, 2019, 2023ರ ಈ ದಿನ ಶತಕ ಬಾರಿಸಿದ್ದಾರೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನದಲ್ಲಿ 122, 2018ರಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ 153, 2019ರಲ್ಲಿ ಆಸೀಸ್ ವಿರುದ್ಧ ಏಕದಿನದಲ್ಲಿ 104 ರನ್ ಗಳಿಸಿದ್ದರು.
ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ವಿಶ್ವಕಪ್ ವರ್ಷಕ್ಕೆ ಸ್ವಾಗತ!
ತಿರುವನಂತಪುರಂ: ವಿಶ್ವಕಪ್ ಸಿದ್ಧತೆಯಲ್ಲಿ ಭಾರತ ಮೊದಲ ಚಾಲೆಂಜ್ ಗೆದ್ದಿದೆ. ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 318 ರನ್‌ಗಳಿಂದ ಗೆಲ್ಲುವ ಮೂಲಕ ಏಕದಿನದಲ್ಲಿ ಅತಿದೊಡ್ಡ ಗೆಲುವಿನ ವಿಶ್ವ ದಾಖಲೆ ಬರೆಯುವುದರ ಜೊತೆಗೆ ಸರಣಿಯನ್ನು 3-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ವಿಶ್ವಕಪ್‌ಗೆ ಭಾರತದ ಬ್ಯಾಟಿಂಗ್ ಪಡೆ ಬಹುತೇಕ ಸಿದ್ಧಗೊಂಡಂತೆ ತೋರುತ್ತಿದ್ದು, ಬೌಲಿಂಗ್ ಸಂಯೋಜನೆಯನ್ನು ಅಂತಿಮಗೊಳಿಸಬೇಕಿದೆ. ಸಿರಾಜ್, ಶಮಿ, ಕುಲ್ದೀಪ್ ಸ್ಥಿರ ಪ್ರದರ್ಶನ ಮುಂದುವರಿಸಿದ್ದು, ಬೂಮ್ರಾ ಹಾಗೂ ಜಡೇಜಾ ತಂಡಕ್ಕೆ ಮರಳಿದರೆ ವಿಶ್ವಕಪ್‌ಗೆ 15 ಸದಸ್ಯರ ತಂಡ ಬಹುತೇಕ ಅಂತಿಮಗೊಳ್ಳಲಿದೆ.
IND vs SL ಸಿರಾಜ್ ದಾಳಿಗೆ ಲಂಕಾ 73 ರನ್‌ಗೆ ಆಲೌಟ್, 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್!
ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ರನ್ ಹೊಳೆ ಹರಿಸಿತು. ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಯವರ ಶತಕಗಳ ನೆರವಿನಿಂದ 50 ಓವರಲ್ಲಿ 5 ವಿಕೆಟ್‌ಗೆ 390 ರನ್ ಕಲೆಹಾಕಿದ ಭಾರತ, ಮಾರಕ ಬೌಲಿಂಗ್ ದಾಳಿ ನಡೆಸಿ ಶ್ರೀಲಂಕಾವನ್ನು ಕೇವಲ 73 ರನ್‌ಗೆ ಆಲೌಟ್ ಮಾಡಿತು.