ರಾಜ್‌ಕೋಟ್(ಜ.17): ಶಿಖರ್ ಧವನ್ ಶತಕ ವಂಚಿತ ಬ್ಯಾಟಿಂಗ್‌ ಹಾಗೂ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ 340 ರನ್ ಕಲೆ ಹಾಕಿದೆ. ಈ ಮೂಲಕ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಕಠಿಣ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಧವನ್-ರೋಹಿತ್ ಜೋಡಿ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ  81 ರನ್‌ಗಳ ಜತೆಯಾಟವಾಡಿದರು. ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ರೋಹಿತ್ ಶರ್ಮಾ 44 ಎಸೆತಗಳಲ್ಲಿ 6 ಬೌಂಡರಿ ಸಹಿತ 42 ರನ್ ಬಾರಿಸಿ ಜಂಪಾಗೆ ವಿಕೆಟ್ ಒಪ್ಪಿಸಿದರು.

ಡೆಲ್ಲಿ ಬ್ಯಾಟ್ಸ್‌ಮನ್‌ಗಳ ಜುಗಲ್‌ಬಂದಿ:  ಎರಡನೇ ವಿಕೆಟ್‌ಗೆ ಜತೆಯಾದ ಡೆಲ್ಲಿ ಬ್ಯಾಟ್ಸ್‌ಮನ್‌ಗಳಾದ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಆಸೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 103 ರನ್‌ಗಳ ಜತೆಯಾಟವಾಡಿತು. ಅದರಲ್ಲೂ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ರಾಜ್‌ಕೋಟ್‌ನಲ್ಲೂ ಅಬ್ಬರಿಸಿದರು. 90 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 96 ರನ್ ಬಾರಿಸಿ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಕೇನ್ ರಿಚರ್ಡ್ಸನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ  ಸ್ಟಾರ್ಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ನಾಯಕ ವಿರಾಟ್ ಕೊಹ್ಲಿ 76 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 78 ರನ್ ಬಾರಿಸಿ ಜಂಪಾ ಹಿಡಿದ ಅಧ್ಬುತ ಕ್ಯಾಚ್‌ಗೆ ಬಲಿಯಾದರು.
ಒಂದು ಸಾವಿರ ರನ್ ಪೂರೈಸಿದ ರಾಹುಲ್: ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅರ್ಧಶತಕ ವಂಚಿತರಾಗಿದ್ದ ರಾಹುಲ್, ರಾಜ್‌ಕೋಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 28ನೇ ಪಂದ್ಯವಾಡಿದ ರಾಹುಲ್ 6ನೇ ಅರ್ಧಶತಕ ಪೂರೈಸಿದರು. ಇನ್ನು 64 ರನ್ ಬಾರಿಸುತ್ತಿದ್ದಂತೆ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಅಂತಿಮವಾಗಿ ರಾಹುಲ್ 52 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 80 ರನ್ ಬಾರಿಸಿ ರನೌಟ್ ಆದರು.
ಆಸ್ಟ್ರೇಲಿಯಾ ಪರ ಆಡಂ ಜಂಪಾ 3 ವಿಕೆಟ್ ಪಡೆದರೆ, ಕೇನ್ ರಿಚರ್ಡ್ಸನ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ: 340/6
ಶಿಖರ್ ಧವನ್: 96
ಕೆ.ಎಲ್ ರಾಹುಲ್: 80
ಆಡಂ ಜಂಪಾ: 50/3
(ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)