- ಶಿವಕುಮಾರ ಕುಷ್ಟಗಿ, ಕನ್ನಡಪ್ರಭ

ಗದಗ(ಮಾ.11): ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಇತ್ತೀಚಿಗೆ ನೇಮಕಗೊಂಡ ಭಾರತ ತಂಡದ ಮಾಜಿ ಸ್ಪಿನ್ನರ್‌ ಸುನೀಲ್‌ ಜೋಶಿ ತಮ್ಮ ಬಾಲ್ಯ ನೆನಪಿಸಿಕೊಂಡು ಅಚ್ಚ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ತಾವು ಹುಟ್ಟಿಬೆಳೆದ ಪ್ರದೇಶಗಳನ್ನು ಸ್ಮರಿಸಿಕೊಂಡಿರುವ ವಿಡಿಯೋವೊಂದು ಈಗ ಸಖತ್‌ ವೈರಲ್‌ ಆಗಿದೆ.

ಮುಂಬೈ ಲಾಬಿಗೆ ಬ್ರೇಕ್ ಹಾಕಿದ ಸುನಿಲ್ ಜೋಶಿ..!

ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಮೂಲತಃ ಗದುಗಿನವರಾಗಿದ್ದು, ಅವರ ಸಾಧನೆಗೆ ಗದುಯಿಂದ ಹೇಳಿಕೊಳ್ಳುತ್ತಿದ್ದಾರೆಗಿನ ಜನ ಹೆಮ್ಮೆ. ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಹುಟ್ಟೂರನ್ನು ಮರೆತಿಲ್ಲ ಎಂದು ಖುಷಿ ಪಡುತ್ತಿದ್ದಾರೆ. ತವರಿಗೆ ಬಂದ ಸುನೀಲ್‌ ಜೋಶಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ನಮ್ಮೂರ ಪ್ರತಿಭೆ ಎಂದು ಗುಣಗಾನ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

"

ನಮಸ್ಕಾರ.. ಎಲ್ಲಾ ವಕೀಲ ಚಾಳ್‌ ವಾರಿಯರ್ಸಗೆ.

ಏನ್‌ ಹೇಳ್‌ಬೇಕು ನನಗಂತೂ ಸಿಕ್ಕಾಪಟ್ಟೆಖುಷಿ ಆಗ್ತಿದೆ. ಏನಂತಂದ್ರ ವಕೀಲ್‌ ಚಾಳ್‌ದಲ್ಲಿ ಹುಟ್ಟಿ, ವಕೀಲ್‌ ಚಾಳ್‌ನಲ್ಲಿ ನೀರು ಕುಡಿದು, ವಕೀಲ್‌ ಚಾಳ್‌ದಲ್ಲಿ ಬೆಳ್ದು.. ನಮ್ಮೆಲ್ಲಾ ಸೀನಿಯರ್ಸ್‌ ಇರಬೇಕು, ನನ್ನ ಜೊತೆ ಆಡಿದವರು ಇರಬಹುದು. ಅವರೊಟ್ಟಿಗೆ ಗುಂಡಾ ಆಡಿರಬೇಕು.. ಚಿಣಿ, ಪಣಿ ಆಡಿರಬೇಕು, ಸರಿಬಡಗಿ ಆಡಿರಬಹುದು, ಛಾಪಾ ಆಡಿರಬಹುದು.. ಏನ್‌ ಖುಷಿ ಆಗತ್‌ ಅಂದ್ರ.. ಎಲ್ಲಾ ನಿಮ್ಮ ಆಶೀರ್ವಾದ. ಬೆಸ್ಟ್‌ ವಿಷಸ್‌, ಆ ಮೇಲೆ ನಮ್ಮ ಓಣಿ ಒಳಗ್‌ ಏನ್‌ ಒಗ್ಗಟ್ಟ ಇತ್ತು. ಯಾವುದೇ ಹಬ್ಬ ಬರಲಿ, ಕಾರಹುಣ್ಣಿಮಿ ಬರಲಿ, ಪಟಾ ಹಾರ್ಸೋದ ಇರಲಿ, ಹೋಳಿ ಹುಣ್ಣಿಮೆ ಬಂದ್ರ, ಕಟಿಗಿ ಕಳವು ಮಾಡುವುದು ಇರ್ಲಿ, ಎಷ್ಟು ಖುಷಿ ಕೊಡ್ತದ ಅಂದ್ರ. ಇವತ್ತಿನ ದಿನಾ ಈ ಸ್ಟೇಜಿಗೆ ಬಂದಿನಿ ಅಂದ್ರ... ನಿಮ್ಮೆಲ್ರ ಸಪೋರ್ಟ್‌. ನನ್ನ ಜೊತೆ ಹೀಗೆ ಇರ್ರೀ ಎಂದು ಒಂದು ಸೆಲ್ಪಿ ವಿಡಿಯೋ ಮಾಡಿ ತಾವು ಬೆಳೆದ ವಕೀಲಚಾಳ್‌ ನಿವಾಸಿಗಳ ಗ್ರೂಪ್‌ನಲ್ಲಿ ಶೇರ್‌ ಮಾಡಿದ್ದಾರೆ.

ಸುನೀಲ ಜೋಶಿ ಒಬ್ಬ ಪ್ರತಿಭಾನ್ವಿತ ಆಟಗಾರ, ಬಾಲ್ಯದ ದಿನಗಳಲ್ಲಿ ಗದಗ ನಗರದಲ್ಲಿ ತಮ್ಮ ಪ್ರತಿಭೆಯಿಂದ ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಅವರು, ಅಂದಿನ ಕಷ್ಟದ ದಿನಗಳಲ್ಲಿ ನಿತ್ಯವೂ ರೈಲಿನ ಮೂಲಕ ಹುಬ್ಬಳ್ಳಿಗೆ ಸಂಚರಿಸಿ ತಮ್ಮ ಶಿಕ್ಷಣ ಮುಗಿಸಿ, ಈಗ ಎತ್ತರಕ್ಕೆ ಬೆಳೆದಿದ್ದಾರೆ. ಈಗ ಭಾರತ ತಂಡದ ಆಯ್ಕೆ ಸಮಿತಿಯ ಅಧ್ಯ​ಕ್ಷ​ರಾಗಿ ಆಯ್ಕೆ​ಯಾ​ಗಿ​ರು​ವುದು ಗದುಗಿನ ದೊಡ್ಡ ಹೆಮ್ಮೆ ಮತ್ತು ನಮ್ಮ ಜಿಲ್ಲೆಯ ಯುವಕರಿಗೆ ದೊಡ್ಡ ಪ್ರೇರಣೆ.

-ಎಚ್‌.ಕೆ. ಪಾಟೀಲ, ಸುನೀಲ್‌ ಜೋಶಿ ಅಭಿಮಾನಿ.