ಆಕ್ಲೆಂಡ್(ಜ.26): ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಮತ್ತೊಂದು ಅಂತಹದ್ದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದೆ.

ಇನ್ನು ನ್ಯೂಜಿಲೆಂಡ್ ತಂಡ ತವರಿನಲ್ಲೇ ಮೊದಲ ಪಂದ್ಯ ಸೋತು ಮುಖಭಂಗ ಅನುಭವಿಸಿದ್ದು, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಲು ತುದಿಗಾಲಿನಲ್ಲಿ ನಿಂತಿದೆ. ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

2ನೇ ಟಿ20: ಈಡನ್‌ ಪಾರ್ಕ್‌ನಲ್ಲಿ ಮತ್ತೆ ರನ್‌ ಮಳೆ?

ಹೌದು, ಟೀಂ ಇಂಡಿಯಾ ಬೃಹತ್ ಮೊತ್ತ ಬೆನ್ನಟ್ಟಿ ಗೆಲುವು ಪಡೆಯಿತಾದರೂ ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗಿತ್ತು. ಹೀಗಾಗಿ ಕೊಹ್ಲಿ ಎರಡನೇ ಪಂದ್ಯದಲ್ಲಿ ಬೌಲಿಂಗ್‌ಗೆ ಸರ್ಜರಿ ಮಾಡುವ ಸಾಧ್ಯತೆಯಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ಸಾಕಷ್ಟು ದುಬಾರಿಯಾಗಿದ್ದರು. ಶಾರ್ದೂಲ್ ಠಾಕೂರ್ ಬದಲಿಗೆ ನವದೀಪ್ ಸೈನಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಮೊದಲ ಟಿ20 ಪಂದ್ಯದಲ್ಲಿ ಸ್ಪಿನ್ನರ್‌ಗಳು ತಂಡಕ್ಕೆ ನೆರವಾಗಿದ್ದರು. ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್ ಕಿವೀಸ್ ಬ್ಯಾಟ್ಸ್‌ಮನ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಮತ್ತೋರ್ವ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಠಾಕೂರ್ ಬದಲಿಗೆ ವಾಷಿಂಗ್ಟನ್ ಸುಂದರ್ ಇಲ್ಲವೇ ಕುಲ್ದೀಪ್ ಯಾದವ್ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.

ಇಲ್ಲಿದೆ ನೋಡಿ ಇಂಡೋ-ಕಿವೀಸ್ ಮೊದಲ ಟಿ20 ಮ್ಯಾಚ್ ಹೈಲೈಟ್ಸ್‌

ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಕಾಲಿನ್ ಡಿ ಗ್ರಾಂಡ್‌ಹೋಮ್ ತಂಡಕ್ಕೆ ಬೌಲಿಂಗ್‌ನಲ್ಲೂ ನೆರವಾದರೆ ಕಿವೀಸ್‌ಗೆ ಇನ್ನಷ್ಟು ಅನುಕೂಲವಾಗಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ನವದೀಪ್ ಸೈನಿ/ಕುಲ್ದೀಪ್/ಸುಂದರ್, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಹಲ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಿಮ್‌ ಸೀಫರ್ಟ್‌, ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೌಥಿ, ಹ್ಯಾಮಿಶ್‌ ಬೆನ್ನೆಟ್‌, ಬ್ಲೇರ್‌ ಟಿಕ್ನೆರ್‌.

ಪಂದ್ಯ ಆರಂಭ: ಮಧ್ಯಾಹ್ನ 12.20ಕ್ಕೆ,
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1