ಆಕ್ಲೆಂಡ್‌(ಜ.26): ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ, ಸುದೀರ್ಘ ಪ್ರಯಾಣದ ಆಯಾಸ ಮರೆತ ಟೀಂ ಇಂಡಿಯಾ ಭಾನುವಾರ ಇಲ್ಲಿನ ಈಡನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯದಲ್ಲೂ ಯಶಸ್ಸು ಗಳಿಸಿ, ಜಯದ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಆತಿಥೇಯ ನ್ಯೂಜಿಲೆಂಡ್‌ ಸರಣಿ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದು, ಪರಿಸ್ಥಿತಿ ಕೈಮೀರುವ ಮೊದಲು ಪುಟಿದೇಳಲು ಕಾತರಿಸುತ್ತಿದೆ. ಇದೇ ಕ್ರೀಡಾಂಗಣದಲ್ಲಿ 2 ದಿನಗಳ ಹಿಂದೆ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ರನ್‌ ಹೊಳೆ ಹರಿದಿತ್ತು. ಈ ಪಂದ್ಯದಲ್ಲೂ ಉಭಯ ತಂಡಗಳ ದಾಂಡಿಗರು ಅಬ್ಬರಿಸಲು ಸಜ್ಜಾಗಿದ್ದಾರೆ.

ಟೀಂ ಇಂಡಿಯಾಗೆ ಸಿಕ್ತು ಕೈಫ್-ಯುವಿ ಹೋಲುವ ಕಿಲಾಡಿ ಜೋಡಿ..!

ಟೀಂ ಇಂಡಿಯಾದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಬ್ಯಾಟಿಂಗ್‌ ಕ್ರಮಾಂಕ ನಿಗದಿಯಾದಂತೆ ಕಾಣುತ್ತಿದೆ. ಕೆ.ಎಲ್‌.ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ತಂಡದ ಆಡಳಿತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಆಡುವ ಹನ್ನೊಂದರಲ್ಲಿ ಏನಾದರೂ ಬದಲಾವಣೆ ತಂದರೆ ಅದು ಬೌಲಿಂಗ್‌ ವಿಭಾಗದಲ್ಲೇ ಆಗಿರಲಿದೆ. ಜಸ್‌ಪ್ರೀತ್‌ ಬುಮ್ರಾ ಹೊರತು ಮಾತ್ರ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಎನಿಸಿದ್ದರು. ಮೊಹಮದ್‌ ಶಮಿ ಹಾಗೂ ಶಾರ್ದೂಲ್‌ ಠಾಕೂರ್‌ ದುಬಾರಿಯಾಗಿದ್ದರು. ಇವರಿಬ್ಬರು ಬೌಲ್‌ ಮಾಡುತ್ತಿದ್ದ ವೇಗವನ್ನು ಬಳಸಿಕೊಂಡು ಕಿವೀಸ್‌ ಬ್ಯಾಟ್ಸ್‌ಮನ್‌ಗಳು ಬೌಂಡರಿಗಳನ್ನು ಗಳಿಸಿದರು. ಶಮಿ ಆಡುವ ಹನ್ನೊಂದರಲ್ಲಿ ಉಳಿದುಕೊಳ್ಳುವ ನಿರೀಕ್ಷೆ ಇದೆ. ಶಾರ್ದೂಲ್‌ ಬದಲಿಗೆ ನವ್‌ದೀಪ್‌ ಸೈನಿಗೆ ಸ್ಥಾನ ಸಿಗಬಹುದು. ಆದರೆ ಸೈನಿಯ ಹೆಚ್ಚುವರಿ ವೇಗ ಬೌಂಡರಿ ಗಳಿಸುವುದನ್ನು ಮತ್ತಷ್ಟು ಸುಲಭಗೊಳಿಸಬಹುದು.

ಇಲ್ಲಿದೆ ನೋಡಿ ಇಂಡೋ-ಕಿವೀಸ್ ಮೊದಲ ಟಿ20 ಮ್ಯಾಚ್ ಹೈಲೈಟ್ಸ್‌

ಭಾರತ ಮೂವರು ತಜ್ಞ ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳ ಸಂಯೋಜನೆಯನ್ನೇ ಮುಂದುವರಿಸುತ್ತಾ ಅಥವಾ, ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್‌ ಜತೆಗೆ ಕುಲ್ದೀಪ್‌ ಯಾದವ್‌ ಇಲ್ಲವೇ ವಾಷಿಂಗ್ಟನ್‌ ಸುಂದರ್‌ರನ್ನು ಆಡಿಸಲು ಕೊಹ್ಲಿ ನಿರ್ಧರಿಸುತ್ತಾರಾ ಎನ್ನುವ ಬಗ್ಗೆ ಕುತೂಹಲವಿದೆ.

ಮೊದಲು ಬ್ಯಾಟ್‌ ಮಾಡಲು ಈಗಲೂ ಕೊಹ್ಲಿಗೆ ಹಿಂಜರಿಕೆ?

ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ, ತಂಡ ಟಾಸ್‌ ಗೆದ್ದರೆ ಮೊದಲು ಬ್ಯಾಟ್‌ ಮಾಡಿ ಗುರಿ ನಿಗದಿಪಡಿಸಲು ಸಮರ್ಥವಿದೆ. ಎಲ್ಲಾ ಸವಾಲಿಗೂ ನಾವು ಸಿದ್ಧರಿದ್ದೇವೆ ಎಂದು ಪದೇ ಪದೇ ಹೇಳುತ್ತಲೇ ಇದ್ದರೂ, ತಂಡ ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ ಎನ್ನುವ ಅನುಮಾನ ಹಾಗೇ ಉಳಿದಿದೆ.

ಮೊದಲ ಟಿ20ಯಲ್ಲಿ ಟಾಸ್‌ ಗೆದ್ದ ಕೊಹ್ಲಿ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿದರು. ಭಾರತ ತಂಡ ಗುರಿ ಬೆನ್ನತ್ತುವಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ಆದರೆ ಮೊದಲು ಬ್ಯಾಟ್‌ ಮಾಡಿ ಗುರಿ ನಿಗದಿಪಡಿಸುವಲ್ಲಿ ಹಿಂದೆ ಬೀಳುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳದಿದ್ದರೆ, ವಿಶ್ವಕಪ್‌ನಲ್ಲಿ ತೊಂದರೆ ಅನುಭವಿಸುವುದು ಖಚಿತ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಕಿವೀಸ್‌ಗೆ ಬೌಲರ್‌ಗಳ ಕೊರತೆ: ಪ್ರಮುಖ ಬೌಲರ್‌ಗಳು ಗಾಯಗೊಂಡು ಹೊರಬಿದ್ದಿರುವ ಕಾರಣ, ನ್ಯೂಜಿಲೆಂಡ್‌ ತಂಡ ಅನನುಭವಿ ಬೌಲರ್‌ಗಳನ್ನಿಟ್ಟುಕೊಂಡ ಭಾರತ ವಿರುದ್ಧ ಸೆಣಸಲು ಕಷ್ಟಪಡುತ್ತಿದೆ. ಅನುಭವಿ ಟಿಮ್‌ ಸೌಥಿ ಒಬ್ಬರೇ ಪಂದ್ಯದ ಗತಿ ಬದಲಿಸಲು ಸಾಧ್ಯವಿಲ್ಲ. ಸ್ಪಿನ್ನರ್‌ಗಳಾದ ಇಶ್‌ ಸೋಧಿ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಎನಿಸಲಿಲ್ಲ. ಹೀಗಾಗಿ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಬೀಳಲಿದೆ. ಮೊದಲ ಪಂದ್ಯದಲ್ಲಿ 203 ರನ್‌ ಗಳಿಸಿಯೂ ಕಿವೀಸ್‌ 15ರಿಂದ 20 ರನ್‌ಗಳ ಕೊರತೆ ಎದುರಿಸಿತು. ಈ ಸಮಸ್ಯೆಗೆ ಆತಿಥೇಯರು ಪರಿಹಾರ ಕಂಡುಕೊಳ್ಳದಿದ್ದರೆ ಸರಣಿ ಕೈಜಾರಲಿದೆ.

ಪಿಚ್‌ ರಿಪೋರ್ಟ್‌

ಈಡನ್‌ ಪಾರ್ಕ್ ಮೈದಾನದಲ್ಲಿ 200 ರನ್‌ ಕೂಡ ಸುರಕ್ಷಿತವಲ್ಲ. ಇದು ಬ್ಯಾಟ್ಸ್‌ಮನ್‌ಗಳ ಸ್ವರ್ಗ. ಬೌಂಡರಿಗಳು ಚಿಕ್ಕದಿರುವ ಕಾರಣ ರನ್‌ ಹೊಳೆ ಹರಿಯಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ 230ರಿಂದ 240 ರನ್‌ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. ಬೌಲಿಂಗ್‌ ವೇಗದಲ್ಲಿ ನಿರಂತರವಾಗಿ ಬದಲಾವಣೆ ಮಾಡಿದರೆ ರನ್‌ ನಿಯಂತ್ರಿಸಲು ಸಾಧ್ಯ ಎಂದು ಬುಮ್ರಾ ಮೊದಲ ಟಿ20ಯಲ್ಲಿ ತೋರಿಸಿಕೊಟ್ಟಿದ್ದರು. ಇದೇ ತಂತ್ರವನ್ನು ಬೌಲರ್‌ಗಳು ಅನುಸರಿಸಬೇಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.20ಕ್ಕೆ,
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1