* ಶೇನ್‌ ವಾರ್ನ್‌ ನಿಧನಕ್ಕೆ ಸಂತಾಪ ಸೂಚಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ* ದಿಗ್ಗಜ ಲೆಗ್‌ಸ್ಪಿನ್ನರ್ ಶೇನ್ ವಾರ್ನ್‌ ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.* ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದ ಭಾರತ-ಶ್ರೀಲಂಕಾ ಕ್ರಿಕೆಟಿಗರು

ಮೊಹಾಲಿ(ಮಾ.05): ವಿಶ್ವಕ್ರಿಕೆಟ್‌ನ ಮಾಂತ್ರಿಕ ಸ್ಪಿನ್ನರ್ ಶೇನ್‌ ವಾರ್ನ್‌ (Shane Warne) ಹೃದಯಾಘಾತದಿಂದ ಕೊನೆಯುಸಿರೆಳೆದ ಸುದ್ದಿಯ ಶಾಕ್‌ನಿಂದ ಇನ್ನೂ ಕ್ರಿಕೆಟ್ ಜಗತ್ತು ಹೊರಬಂದಿಲ್ಲ. ದಿಗ್ಗಜ ಲೆಗ್‌ಸ್ಪಿನ್ನರ್ ಶೇನ್ ವಾರ್ನ್‌ ಶುಕ್ರವಾರ (ಮಾ.5) ಸಂಜೆ ವೇಳೆಗೆ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಶೇನ್ ವಾರ್ನ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ದಿಗ್ಗಜ ಲೆಗ್‌ ಸ್ಪಿನ್ನರ್ ನಿಧನಕ್ಕೆ ಇಡೀ ಕ್ರೀಡಾ ಜಗತ್ತೇ ಕಂಬನಿ ಮಿಡಿದಿದೆ. ಇದೀಗ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma) ಕೂಡಾ ತಮ್ಮ ನುಡಿನಮನ ಸಲ್ಲಿಸಿದ್ದಾರೆ.

ಸದ್ಯ ಭಾರತ ಕ್ರಿಕೆಟ್ ತಂಡವು (Indian Cricket Team) ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ದ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದು ವಿರಾಟ್ ಕೊಹ್ಲಿ ಪಾಲಿಗೆ ನೂರನೇ ಟೆಸ್ಟ್ ಪಂದ್ಯ ಎನಿಸಿದೆ. ಇದೀಗ ಲಂಕಾ ಎದುರಿನ ಎರಡನೇ ದಿನದಾಟ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ ದಿಗ್ಗಜನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಲ್ಲಿನ ಪಂಜಾಬ್‌ ಕ್ರಿಕೆಟ್ ಸಂಸ್ಥೆಯ ಐ.ಎಸ್. ಬಿಂದ್ರಾ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನದಾಟಕ್ಕೂ ಮುನ್ನ ಮಾತನಾಡಿದ ವಿರಾಟ್ ಕೊಹ್ಲಿ, ಜೀವನ ಎನ್ನುವುದು ಒಂದು ರೀತಿ ಚಂಚಲ ಹಾಗೂ ಅನಿಶ್ಚಿತತೆಯಿಂದ ಕೂಡಿದೆ. ನಾನಿಲ್ಲಿ ನಿಂತುಕೊಂಡು ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಆಘಾತಕ್ಕೊಳಗಾಗಿದ್ಧೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

View post on Instagram

ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಶೇನ್ ವಾರ್ನ್ ನಿಧನಕ್ಕೆ ನುಡಿನಮನ ಸಲ್ಲಿಸಿದ್ದಾರೆ. ಲಂಕಾ ಎದುರಿನ ಎರಡನೇ ದಿನದಾಟಕ್ಕೂ ಮುನ್ನ ಮಾತನಾಡಿದ ಅವರು, ಶೇನ್ ವಾರ್ನ್‌ ಅವರ ನಿಧನ ವಿಶ್ವಕಪ್‌ ಕ್ರಿಕೆಟ್‌ಗೆ ಆದಂತಹ ದೊಡ್ಡ ನಷ್ಟ. ಅವರು ಒಂದು ತಲೆಮಾರಿನ ಕ್ರಿಕೆಟಿಗರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ಈ ಆಘಾತಕಾರಿ ಸುದ್ದಿ ಕೇಳಿ ನಮ್ಮ ಭಾರತ ತಂಡ ಕೂಡಾ ನೋವನ್ನು ಅನುಭವಿಸಿದೆ. ಶೇನ್ ವಾರ್ನ್ ಅವರೊಬ್ಬ ಜಗತ್ತಿನ ಶ್ರೇಷ್ಠ ಸ್ಪಿನ್ನರ್ ಆಗಿದ್ದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

View post on Instagram
Scroll to load tweet…

ಇದಾದ ಬಳಿಕ ಎರಡನೇ ದಿನದಾಟ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶುಕ್ರವಾರ ನಮ್ಮನ್ನು ಅಗಲಿದ ಶೇನ್ ವಾರ್ನ್‌ ಹಾಗೂ ವಿಕೆಟ್‌ ಬ್ಯಾಟರ್ ರಾಡ್ ಮಾರ್ಷ್ ನಿಧನದ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಮೂಲಕ ಅಗಲಿದ ಚೇತನಗಳಿಗೆ ಸಂತಾಪ ಸೂಚಿಸಲಾಯಿತು. ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್‌ ಕೀಪರ್‌ ಬ್ಯಾಟರ್ ರಾಡ್ ಮಾರ್ಷ್ ಕೂಡಾ ಶುಕ್ರವಾರವೇ ಹೃದಯಾಘಾತದಿಂದ ನಿಧನರಾಗಿದ್ದರು. ರಾಡ್ ಮಾರ್ಷ್ ಆಸ್ಟ್ರೇಲಿಯಾ ಪರ 96 ಟೆಸ್ಟ್ ಹಾಗೂ 92 ಏಕದಿನ ಪಂದ್ಯಗಳನ್ನಾಡಿದ್ದರು. ಭಾರತ ಹಾಗೂ ಶ್ರೀಲಂಕಾ ತಂಡಗಳು ಈ ಇಬ್ಬರು ಕ್ರಿಕೆಟಿಗರ ನಿಧನಕ್ಕೆ ಮೌನಾಚರಣೆ ಮಾಡಿದ ಬಳಿಕ ತೋಳಿಗೆ ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಗೌರವ್ ಸೂಚಿಸಿವೆ.

RIP Shane warne ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಕೊನೆಯ ಟ್ವೀಟ್, ಕೆಲವೇ ಗಂಟೆಗಳಲ್ಲಿ ವಾರ್ನ್‌ಗೆ ಹೃದಯಾಘಾತ!

ಶೇನ್ ವಾರ್ನ್, 1992 ರಿಂದ 2007ರ ವರೆಗೆ ಸುಮಾರು ಒಂದೂವರೆ ದಶಕಗಳ ಕಾಲ ವಿಶ್ವ ಕ್ರಿಕೆಟ್ ಆಳಿದ್ದರು. ಇದರ ಜತೆಗೆ 1999ರಲ್ಲಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್(World Cup) ಗೆಲುವಿನಲ್ಲಿ ವಾರ್ನ್‌ ಪ್ರಮುಖ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾ ಪರವಾಗಿ 145 ಟೆಸ್ಟ್ (Test) ಹಾಗೂ 194 ಏಕದಿನ (ODI) ಪಂದ್ಯವಾಡಿದ್ದ ವಾರ್ನ್, ಏಕದಿನ ಕ್ರಿಕೆಟ್ ನಲ್ಲಿ 293 ವಿಕೆಟ್ ಉರುಳಿಸಿದ್ದರು. ಶೇನ್ ವಾರ್ನ್ 708 ಟೆಸ್ಟ್ ವಿಕೆಟ್ ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ಪರವಾಗಿ ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ಬೌಲರ್ ಹಾಗೂ ಸಾರ್ವಕಾಲಿಕವಾಗಿ ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ವಿಶ್ವದ 2ನೇ ಬೌಲರ್ ಎನಿಸಿದ್ದಾರೆ.