ರನೌಟ್ ಮಾಡಲು ಹೋಗಿ 4 ರನ್ ಬಿಟ್ಟು ಕೊಟ್ಟು, ಅಂಪೈರ್ ಜತೆ ವಾದ ಮಾಡಿದ ಸಿರಾಜ್..! ವಿಡಿಯೋ ವೈರಲ್
ರಾಂಚಿ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೀಂ ಇಂಡಿಯಾ ಜಯಭೇರಿ
ಮಾರಕ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆದ ವೇಗಿ ಮೊಹಮ್ಮದ್ ಸಿರಾಜ್
ರನೌಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಹೈದರಾಬಾದ್ ಮೂಲದ ವೇಗಿ
ರಾಂಚಿ(ಅ.10): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇನ್ನು ಇದೇ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಮಾಡಿದ ಒಂದು ಎಡವಟ್ಟು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್, ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಇದೇ ಪಂದ್ಯದಲ್ಲಿ ಮಾಡಿದ ಎಡವಟ್ಟೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿರಾಜ್ ರನೌಟ್ ಮಾಡಲು ಹೋಗಿ ಬೈಸ್ ಮೂಲಕ 4 ರನ್ ನೀಡಿದ್ದಲ್ಲದೇ, ಅಂಪೈರ್ ಜತೆ ವಾಗ್ವಾದ ನಡೆಸಿರುವ ಕ್ಷಣ ಇದೀಗ ವೈರಲ್ ಆಗಿದೆ. ಪಂದ್ಯದ 48ನೇ ಓವರ್ ವೇಳೆ ಸಿರಾಜ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಸ್ಟ್ರೈಕ್‌ನಲ್ಲಿದ್ದ ಕೇಶವ್ ಮಹರಾಜ್ ಬೀಟ್ ಮಾಡಿದರು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ಚೆಂಡನ್ನು ನೇರವಾಗಿ ಸಿರಾಜ್‌ಗೆ ನೀಡಿದರು. ಆಗ ನಾನ್ ಸ್ಟ್ರೈಕರ್‌ನಲ್ಲಿದ್ದ ಡೇವಿಡ್ ಮಿಲ್ಲರ್, ಕ್ರೀಸ್ ಬಿಟ್ಟು ಮುಂದೆ ಬಂದಿದ್ದರು. ಹೀಗಾಗಿ ರನೌಟ್ ಮಾಡುವ ಉದ್ದೇಶದಿಂದ ಸಿರಾಜ್, ನಾನ್ ಸ್ಟ್ರೈಕರ್‌ನ ವಿಕೆಟ್‌ನತ್ತ ಚೆಂಡನ್ನು ಎಸೆದರು. ಆದರೆ ಚೆಂಡು ವಿಕೆಟ್‌ಗೆ ಬಡಿಯದೇ ವೇಗವಾಗಿ ಬೌಂಡರಿ ಗೆರೆ ದಾಟಿತು. ಆಗ ಅಂಪೈರ್ ಬೈಸ್ ಮೂಲಕ 4 ರನ್‌ಗಳ ತೀರ್ಮಾನ ನೀಡಿದರು. ಇಷ್ಟಕ್ಕೆ ಸುಮ್ಮನಾಗದ ಸಿರಾಜ್, ಅಂಪೈರ್ ಜತೆ ವಾದ ಕೂಡಾ ನಡೆಸಿದರು. ಈ ವಿಡಿಯೋ ಈಗ ವೈರಲ್ ಆಗಿದೆ.
ಈ ಘಟನೆಯ ಹೊರತಾಗಿಯೂ ಮೊಹಮ್ಮದ್ ಸಿರಾಜ್, ಶಿಸ್ತುಬದ್ದ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್ ಮಾಡಿ ಉತ್ತಮ ಆರಂಭ ಒದಗಿಸಿಕೊಟ್ಟರು. ಇದಾದ ಬಳಿಕ 74 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ರೀಜಾ ಹೆಂಡ್ರಿಕ್ಸ್ ಹಾಗೂ ಕೇಶವ್ ಮಹರಾಜ್ ಅವರ ವಿಕೆಟ್ ಕಬಳಿಸುವ ಮೂಲಕ ಹರಿಣಗಳ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪರಿಣಾಮ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 278 ರನ್ ಗಳಿಸಲಷ್ಟೇ ಶಕ್ತವಾಯಿತು. ವೇಗಿ ಸಿರಾಜ್ 10 ಓವರ್‌ನಲ್ಲಿ ಒಂದು ಮೇಡನ್ ಓವರ್ ಸಹಿತ ಕೇವಲ 38 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
Team India ಪಂದ್ಯ ಗೆದ್ದ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹರಾಜ್‌ಗೆ ಥ್ಯಾಂಕ್ಸ್ ಹೇಳಿದ ಶಿಖರ್ ಧವನ್..!
ಇನ್ನು ಮಾಡು ಇಲ್ಲವೇ ಮಡಿ ಎನಿಸಿದ್ದ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಶಿಖರ್ ಧವನ್(13) ಹಾಗೂ ಶುಭ್‌ಮನ್ ಗಿಲ್(28) ದೊಡ್ಡ ಮೊತ್ತ ಗಳಿಸಲು ವಿಫಲವಾದರು. ಆದರೆ ಮೂರನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಜೋಡಿ 161 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ 84 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 93 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 111 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 113 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೇಯಸ್ ಅಯ್ಯರ್‌ಗೆ ಕೊನೆಯಲ್ಲಿ ಸಂಜು ಸ್ಯಾಮ್ಸನ್ ಅಜೇಯ 30 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು.