ಅಹಮದಾಬಾದ್(ಮಾ.03)‌: ಟೀಂ ಇಂಡಿಯಾದ ವೇಗಿ ಜಸ್ಟ್ರೀತ್‌ ಬುಮ್ರಾ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. 

27 ವರ್ಷದ ಬುಮ್ರಾ ಅವರ ವಿವಾಹ ನಿಶ್ಚಯವಾಗಿದ್ದು, ಇದರ ಸಿದ್ಧತೆಗಾಗಿ ಜಸ್ಪ್ರೀತ್ ಬುಮ್ರಾ ರಜೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಇನ್ನು ಪಿಂಕ್‌ ಬಾಲ್‌ ಟೆಸ್ಟ್‌ಗೆ ಬುಮ್ರಾ ಕಮ್‌ಬ್ಯಾಕ್‌ ಮಾಡಿದ್ದರಾದರೂ ವಿಕೆಟ್‌ ಕಬಳಿಸಲು ಸಫಲವಾಗಿರಲಿಲ್ಲ. 

ಪ್ರಸ್ತುತ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿರುವ ಬುಮ್ರಾ, 4 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಜಸ್ಪ್ರೀತ್‌ ಬುಮ್ರಾಗೆ ಇಂಗ್ಲೆಂಡ್‌ ವಿರುದ್ದದ 5 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಿಂದಲೂ ವಿಶ್ರಾಂತಿ ದೊರೆಯುವ ಸಾಧ್ಯತೆಯಿದೆ. ಹೀಗಾದಲ್ಲಿ ಬುಮ್ರಾ 14ನೇ ಆವೃತ್ತಿಯ ಐಪಿಎಲ್ ವೇಳೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯಿದೆ.

ಟೀಂ ಇಂಡಿಯಾಗೆ ಎದುರಾಗಿದೆ ಮತ್ತೊಂದು ಚಿಂತೆ, ಏಕದಿನಕ್ಕೂ ಬುಮ್ರಾ ಅಲಭ್ಯ?

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2-1ರಲ್ಲಿ ಮುನ್ನಡೆ ಸಾಧಿಸಿದ್ದು, ಮಾರ್ಚ್‌ 04ರಿಂದ ಆರಂಭವಾಗಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಇಲ್ಲವೇ ಡ್ರಾ ಸಾಧಿಸಿದರೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.