ನವದೆಹಲಿ(ಜ.21): ಭಾರತ ತಂಡದ ಹಿರಿಯ ವೇಗಿ ಇಶಾಂತ್‌ ಶರ್ಮಾ ಸೋಮವಾರ ರಣಜಿ ಪಂದ್ಯದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣೆಗೆ ಆಯ್ಕೆಯಾಗುವುದು ಅನುಮಾನವೆನಿಸಿದೆ. 

ಇಶಾಂತ್‌, ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಗೆ ಆಗಮಿಸಲಿದ್ದಾರೆ. ಕಾಲು ಉಳುಕಿದ್ದರೆ ಒಂದೆರಡು ವಾರಗಳಲ್ಲಿ ಗುಣಮುಖರಾಗಲಿದ್ದಾರೆ, ಮೂಳೆ ಮುರಿದಿದ್ದರೆ 4-5 ವಾರಗಳ ಸಮಯ ಬೇಕಾಗುತ್ತದೆ ಎಂದು ದೆಹಲಿ ತಂಡದ ವ್ಯವಸ್ಥಾಪಕ ತಿಳಿಸಿದ್ದಾರೆ. 

ಫೆ.21ರಿಂದ ನ್ಯೂಜಿಲೆಂಡ್‌ ವಿರುದ್ಧ 2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಆರಂಭಗೊಳ್ಳಲಿದ್ದು, ಸದ್ಯದಲ್ಲೇ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದೆ. ವಿದೇಶಿ ನೆಲದಲ್ಲಿ ಪರಿಣಾಮಕಾರಿ ಬೌಲರ್ ಎನಿಸಿರುವ ಇಶಾಂತ್ ಶರ್ಮಾ ಒಂದು ವೇಳೆ ಅಲಭ್ಯವಾದರೆ ಟೀಂ ಇಂಡಿಯಾಗೆ ಅಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ.

ಭಾರತ ಪರ 96 ಟೆಸ್ಟ್ ಪಂದ್ಯವನ್ನಾಡಿರುವ ಇಶಾಂತ್ ಇನ್ನು ನಾಲ್ಕು ಪಂದ್ಯವನ್ನಾಡಿದರೆ ನೂರು ಟೆಸ್ಟ್ ಪಂದ್ಯವನ್ನಾಡಿದ ಭಾರತದ ಎರಡನೇ ವೇಗದ ಬೌಲರ್ ಎನ್ನುವ ಗೌರವಕ್ಕೆ ಭಾಜನರಾಗಲಿದ್ದಾರೆ. ಟೀಂ ಇಂಡಿಯಾ ಪರ ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿ ಏಕೈಕ ಬೌಲರ್ ಎನ್ನುವ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ.