ನವದೆಹಲಿ(ಫೆ): ಭಾರತ ಕ್ರಿಕೆಟ್‌ ತಂಡದ ಆಟಗಾರ ಅಶೋಕ್‌ ದಿಂಡಾ, ಮೂರು ಮಾದರಿಯ ಕ್ರಿಕೆಟ್‌ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. 

ಭಾರತ ತಂಡವನ್ನು ಪ್ರತಿನಿಧಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನಾನು ಬಂಗಾಳ ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದರಿಂದ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿತು. ನನಗೆ ಭಾರತ ತಂಡದ ಪರ ಆಡಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಬಂಗಾಳ ತಂಡದ ಪರ ಆಡುವಾಗ ಹಿರಿಯ ಆಟಗಾರರಾದ ದೀಪ್‌ದಾಸ್ ಗುಪ್ತಾ, ರೋಹನ್ ಗವಾಸ್ಕರ್ ಅವರಂತಹ ಹಿರಿಯ ಆಟಗಾರರು ನನಗೆ ಸಲಹೆ ನೀಡುತ್ತಿದ್ದರು. ನಾನು ವಿಕೆಟ್‌ ಪಡೆದಾಗಲೆಲ್ಲ ನನ್ನನ್ನು ಹುರಿದುಂಬಿಸುತ್ತಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಅಶೋಕ್‌ ದಿಂಡಾ ಹೇಳಿದ್ದಾರೆ.

ನಾನು ವಿಶೇಷವಾಗಿ ಸೌರವ್ ಗಂಗೂಲಿಗೆ ಧನ್ಯವಾದಗಳನ್ನು ಸಲ್ಲಿಸಬೇಕು. ನನಗಿನ್ನು ನೆನಪಿದೆ 2005-06ರಲ್ಲಿ ಸೌರವ್ ಗಂಗೂಲಿ ನನ್ನನ್ನು 16 ಆಟಗಾರರನ್ನೊಳಗೊಂಡ ಬಂಗಾಳ ತಂಡಕ್ಕೆ ಆಯ್ಕೆ ಮಾಡಿದರು. ಮಹಾರಾಷ್ಟ್ರ ವಿರುದ್ದ ನಾನು ಪಾದಾರ್ಪಣೆ ಮಾಡಿದೆ. ನಾನು ದಾದಾಗೆ ಯಾವತ್ತಿಗೂ ಚಿರಋಣಿ. ಅವರು ಯಾವತ್ತಿಗೂ ನನ್ನನ್ನು ಬೆಂಬಲಿಸುತ್ತಿದ್ದರು. ನಾನು ನಿವೃತ್ತಿ ಪಡೆಯಲು ಸಕಾಲ ಎಂದು ತೀರ್ಮಾನಿಸಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ದಿಂಡಾ ಹೇಳಿದ್ದಾರೆ.

ಇಂಡೋ-ಆಂಗ್ಲೋ ಟೆಸ್ಟ್: ಮೊಹಮ್ಮದ್ ಸಿರಾಜ್‌, ಇಶಾಂತ್‌ ಶರ್ಮಾ ನಡುವೆ ಪೈಪೋಟಿ

ದಿಂಡಾ, ಭಾರತ ಪರ 13 ಏಕದಿನ, 9 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 12 ಮತ್ತು 17 ವಿಕೆಟ್ ಕಬಳಿಸಿದ್ದರು. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನಾಡುವ ಮೂಲಕ ದಿಂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2013ರಲ್ಲಿ ಇಂಗ್ಲೆಂಡ್‌ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 116 ಪ್ರಥಮ ದರ್ಜೆ ಪಂದ್ಯದಲ್ಲಿ ದಿಂಡಾ 420 ವಿಕೆಟ್‌ ಕಬಳಿಸಿದ್ದಾರೆ.