ಚೆನ್ನೈ(ಫೆ.03): ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ಗೆ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಪಡಿಸಲಾಗಿದ್ದು ಭಾರತ ತಂಡ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. 

ಇಬ್ಬರು ವೇಗಿಗಳನ್ನು ಆಡಿಸಲಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಜಸ್‌ಪ್ರೀತ್‌ ಬುಮ್ರಾ ಮೊದಲ ಆಯ್ಕೆಯಾಗಿದ್ದಾರೆ. 2ನೇ ವೇಗಿ ಸ್ಥಾನಕ್ಕೆ ಅನುಭವಿ ಇಶಾಂತ್‌ ಶರ್ಮಾ ಹಾಗೂ ಯುವ ಮೊಹಮದ್‌ ಸಿರಾಜ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

ಇಂದಿನಿಂದ ಭಾರತ-ಇಂಗ್ಲೆಂಡ್ ನೆಟ್ಸ್‌ ಪ್ರಾಕ್ಟೀಸ್‌ ಆರಂಭ

ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಸಿರಾಜ್‌ 3 ಪಂದ್ಯಗಳಲ್ಲಿ 13 ವಿಕೆಟ್‌ ಕಬಳಿಸಿ ಮಿಂಚಿದ್ದರು. ಗಾಯದ ಸಮಸ್ಯೆಯಿಂದಾಗಿ ಆಸ್ಪ್ರೇಲಿಯಾ ಪ್ರವಾಸ ತಪ್ಪಿಸಿಕೊಂಡಿದ್ದ ಇಶಾಂತ್‌, ಫಿಟ್‌ ಆಗಿದ್ದು ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ 14.1 ಓವರ್‌ ಬೌಲ್‌ ಮಾಡಿದ್ದರು.

ಕೊಹ್ಲಿ ಪಡೆ ನೆಟ್ಸ್‌ ಅಭ್ಯಾಸ ಆರಂಭ

ಚೆನ್ನೈ: ಫೆ.5ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ ಮಂಗಳವಾರದಿಂದ ನೆಟ್ಸ್‌ ಅಭ್ಯಾಸ ಆರಂಭಿಸಿತು. 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದ ಆಟಗಾರರು ಸೋಮವಾರ ಸಂಜೆ ಹೊರಾಂಗಣ ಅಭ್ಯಾಸ ನಡೆಸಿದ್ದರು. 

ಮಂಗಳವಾರ ನೆಟ್ಸ್‌ ಅಭ್ಯಾಸಕ್ಕೂ ಮುನ್ನ ಪ್ರಧಾನ ಕೋಚ್‌ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್‌ ಕೊಹ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ದೃಷ್ಟಿಯಿಂದ ಈ ಸರಣಿ ಅತ್ಯಂತ ಮಹತ್ವದ್ದಾಗಿದ್ದು ತಂಡ ಆಸ್ಪ್ರೇಲಿಯಾದಲ್ಲಿ ಆಡಿದಷ್ಟೇ ಉತ್ಸಾಹದಿಂದ ಆಡಬೇಕು ಎಂದು ಸಹ ಆಟಗಾರರನ್ನು ಕೊಹ್ಲಿ ಹುರಿದುಂಬಿಸಿದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.