Asianet Suvarna News Asianet Suvarna News

ICC Test Rankings: ಟೀಂ ಇಂಡಿಯಾ ಸರಣಿ ಗೆದ್ದರಷ್ಟೇ ನಂ.1 ಸ್ಥಾನ ಭದ್ರ..!

* ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ

* ನಂ.1 ಸ್ಥಾನ ಉಳಿಸಿಕೊಳ್ಳಬೇಕಿದ್ದರೆ, ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿ ಗೆಲುವು ಅನಿವಾರ್ಯ

* ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿಲ್ಲ ಭಾರತ ಕ್ರಿಕೆಟ್ ತಂಡ

Team India needs to Series win against South Africa to Retain Test Rankings No 1 Spot kvn
Author
Bengaluru, First Published Dec 25, 2021, 11:21 AM IST

ಸೆಂಚೂರಿಯನ್(ಡಿ.25)‌: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಐಸಿಸಿ ಟೆಸ್ಟ್‌ ತಂಡಗಳ ರ‍್ಯಾಂಕಿಂಗ್‌ (ICC Test Rankings) ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಸರಣಿ ಗೆಲ್ಲಬೇಕಿದೆ. ಭಾರತ 119 ರೇಟಿಂಗ್‌ ಅಂಗಳೊಂದಿಗೆ ಅಗ್ರಸ್ಥಾನದಲ್ಲಿದೆ. 117 ಅಂಕ ಹೊಂದಿರುವ ನ್ಯೂಜಿಲೆಂಡ್‌, 115 ಅಂಕ ಹೊಂದಿರುವ ಆಸ್ಪ್ರೇಲಿಯಾ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಲ್ಲಿ ಗೆದ್ದರೆ ತಂಡದ ರೇಟಿಂಗ್‌ ಅಂಕ 122ಕ್ಕೆ ಏರಿಕೆಯಾಗಲಿದೆ. 2-0ಯಲ್ಲಿ ಗೆದ್ದರೆ 124, 3-0ಯಲ್ಲಿ ಗೆದ್ದರೆ 126ಕ್ಕೇರಲಿದೆ. 2-1ರಲ್ಲಿ ಗೆದ್ದರೆ 122 ರೇಟಿಂಗ್‌ ಅಂಕ ಗಳಿಸಲಿದೆ.

ಆಸ್ಪ್ರೇಲಿಯಾ, ಇಂಗ್ಲೆಂಡ್‌ ವಿರುದ್ಧ ಇನ್ನೂ 3 ಪಂದ್ಯಗಳನ್ನು ಆಡಲಿದೆ. ಇನ್ನು ನ್ಯೂಜಿಲೆಂಡ್‌ಗೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿ ಇದ್ದು, ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಒಂದೊಮ್ಮೆ ಟೀಂ ಇಂಡಿಯಾ(Team India) ಸರಣಿ ಸೋತರೆ 2ನೇ ಇಲ್ಲವೇ 3ನೇ ಸ್ಥಾನಕ್ಕೆ ಕುಸಿಯಲಿದೆ. ಭಾರತ ತಂಡವು ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಜಯಿಸುವ ಮೂಲಕ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 372 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತಂಡವು 1-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. 

ಭಾರತ ಕ್ರಿಕೆಟ್ ತಂಡವು (Indian Cricket Team) 1992ರಿಂದಲೂ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಾಡುತ್ತಿದ್ದು, ಇದುವರೆಗೂ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲು ಟೀಂ ಇಂಡಿಯಾಗೆ ಸಾಧ್ಯವಾಗಿಲ್ಲ. 1992ರಿಂದ 2019ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ (India Tour of South Africa) ಇದುವರೆಗೂ ಒಟ್ಟು 20 ಪಂದ್ಯಗಳನ್ನಾಡಿದ್ದು, ಭಾರತ ಕೇವಲ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡವು 10 ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನು ಏಳು ಪಂದ್ಯಗಳ ಡ್ರಾನಲ್ಲಿ ಅಂತ್ಯವಾಗಿದೆ. ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಹೀಗಾಗಿ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿಯನ್ನು ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇಂಗ್ಲೆಂಡ್‌, ಆಸ್ಪ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ

ಮೆಲ್ಬರ್ನ್‌: ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ (Australia vs England) ನಡುವಿನ ಆ್ಯಷಸ್‌ ಸರಣಿಯ (Ashes Test Series) 3ನೇ ಪಂದ್ಯ ಭಾನುವಾರದಿಂದ ಆರಂಭವಾಗಲಿದೆ. 5 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸೀಸ್‌ ಈಗಾಗಲೇ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. 

Boxing Day Test : ಡಿ. 26ಕ್ಕೆ ಆರಂಭವಾಗುವ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದ್ಯಾಕೆ?

ಇನ್ನು, 2015ರಲ್ಲಿ ತವರಿನಲ್ಲಿ ಸರಣಿ ಗೆದ್ದಿದ್ದ ಇಂಗ್ಲೆಂಡ್‌ ಈ ಸರಣಿ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಕೋವಿಡ್‌ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಿಂದ 2ನೇ ಟೆಸ್ಟ್‌ನಿಂದ ತಂಡದಿಂದ ಹೊರಗುಳಿದಿದ್ದ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ತಂಡಕ್ಕೆ ಮರಳಲಿದ್ದಾರೆ. ಇಂಗ್ಲೆಂಡ್‌ ತಂಡದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆ ಇದೆ.
 

Follow Us:
Download App:
  • android
  • ios