ಫೆಬ್ರವರಿ 05ರಿಂದ ಆರಂಭವಾಗಲಿರುವ ಭಾರತ-ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ ಸ್ಪಿನ್ನರ್‌ಗಳು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ಸಾದ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚೆನ್ನೈ(ಜ.26): ಶ್ರೀಲಂಕಾದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್‌, ಭಾರತಕ್ಕೆ ಭರ್ಜರಿ ಪೈಪೋಟಿ ನೀಡುವ ಸೂಚನೆ ನೀಡಿದೆ. ಅಸ್ಪ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದು ಬಂದಿರುವ ಟೀಂ ಇಂಡಿಯಾಗೆ ತವರಿನಲ್ಲಿ ಇಂಗ್ಲೆಂಡ್‌ ತಂಡದಿಂದ ಕಠಿಣ ಸವಾಲು ಎದುರಾಗಲಿದೆ. ಪ್ರಮುಖವಾಗಿ ಇಂಗ್ಲೆಂಡ್‌ನ ಸ್ಪಿನ್‌ ಬೌಲರ್‌ಗಳು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸವಾಲೆಸೆಯಲಿದ್ದಾರೆ.

ಲಂಕಾದ ಸ್ಪಿನ್‌ ಸ್ನೇಹಿ ಪಿಚ್‌ಗಳಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್‌ಗಳಾದ ಜ್ಯಾಕ್‌ ಲೀಚ್‌ ಹಾಗೂ ಡಾಮ್‌ ಬೆಸ್‌ ಉತ್ತಮ ಪ್ರದರ್ಶನ ತೋರಿದರು. 2 ಪಂದ್ಯಗಳಲ್ಲಿ ಬೆಸ್‌ 12 ವಿಕೆಟ್‌ ಕಬಳಿಸಿದರೆ, ಲೀಚ್‌ 10 ವಿಕೆಟ್‌ ಕಿತ್ತರು. ಅರೆಕಾಲಿಕ ಸ್ಪಿನ್ನರ್‌ ಜೋ ರೂಟ್‌ ಸಹ 2 ವಿಕೆಟ್‌ ಪಡೆದರು. ಕೋವಿಡ್‌ನಿಂದ ಗುಣಮುಖರಾಗಿರುವ ಮೋಯಿನ್‌ ಅಲಿ ಸಹ ಭಾರತ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಲಂಕಾ ವಿರುದ್ಧ ಇಂಗ್ಲೆಂಡ್‌ 2-0 ಸರಣಿ ಕ್ಲೀನ್‌ ಸ್ವೀಪ್

ಸ್ವೀಪ್‌ಶಾಟ್‌ ಅಸ್ತ್ರ: ಲಂಕಾದ ಸ್ಪಿನ್ನ​ರ್‍ಸ್ ಎದುರು ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಸ್ವೀಪ್‌ ಶಾಟ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿ ಯಶಸ್ಸು ಕಂಡಿದ್ದಾರೆ. ಭಾರತದಲ್ಲೂ ರೂಟ್‌, ಬಟ್ಲರ್‌, ಸಿಬ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸ್ವೀಪ್‌ ಶಾಟ್‌ಗೆ ಹೆಚ್ಚು ಪ್ರಯತ್ನಿಸಲಿದ್ದಾರೆ ಎನ್ನುವುದು ತಜ್ಞರ ಅಭಿಪ್ರಾಯ.