ಸಿಂಪ್ಲಿಸಿಟಿ ಅಂದ್ರೆ ಇದು..GRV ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೊನೇ ಸಾಲಿನಲ್ಲಿ ಕುಳಿತ ಡ್ರಾವಿಡ್ ಚಿತ್ರ ವೈರಲ್!
ರಾಹುಲ್ ದ್ರಾವಿಡ್ ಕುರಿತಾದ ಚಿತ್ರವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಮಟ್ಟದಲ್ಲಿ ಶೇರ್ ಆಗುತ್ತಿದೆ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಪಡೆದುಕೊಂಡಿದ್ದ ರಾಹುಲ್ ದ್ರಾವಿಡ್, ಸಮಾರಂಭದ ಕೊನೆಯ ಸೀಟ್ ನಲ್ಲಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಕುಳಿತಿದ್ದರು. ಅಭಿಮಾನಿಗಳು ದ್ರಾವಿಡ್ ಅವರ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, "ಸಿಂಪ್ಲಿಸಿಟಿ ಅಂದರೆ ಇದು" ಎಂದು ಹೇಳಿದ್ದಾರೆ.
ಬೆಂಗಳೂರು (ಮೇ. 12): ಟೀಮ್ ಇಂಡಿಯಾ ಮುಖ್ಯ ಕೋಚ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ತಮ್ಮ ಸಿಂಪಲ್ ಬದುಕು, ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡವರು. ಅಭಿಮಾನಿಗಳಿಂದ ವಾಲ್ ಎಂದೇ ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಅವರ ಸಿಂಪ್ಲಿಸಿಟಿಯ ಇನ್ನೊಂದು ಚಿತ್ರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ವಾಲ್ ಅವರ ಇಂಥದ್ದೊಂದು ಸಿಂಪಲ್ ಬದುಕನ್ನು ಹಿಂದೆಯೂ ಕಂಡಿದ್ದೇವೆ. ಅದಕ್ಕೆ ಈ ಚಿತ್ರ ಮತ್ತೊಂದು ಸೇರ್ಪಡೆಯಷ್ಟೇ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೇ 9 ರಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ರಾಹುಲ್ ದ್ರಾವಿಡ್ ಅವರಿಗೆ ಆಹ್ವಾನ ನೀಡಲಾಗಿತ್ತು. ಸಮಾರಂಭಕ್ಕೆ ಮಾಸ್ಕ್ ಧರಿಸಿ ಆಗಮಿಸಿದ್ದ ರಾಹುಲ್ ದ್ರಾವಿಡ್ ಆಗಮಿಸಿದ್ದರು. ಭಾರತ ಕಂಡ ಸರ್ವಶ್ರೇಷ್ಠ ನಂ.3 ಬ್ಯಾಟ್ಸ್ ಮನ್, ಜಿಆರ್ ವಿಶ್ವನಾಥ್ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಈ ವೇಳೆಗಾಗಲೇ ವೇದಿಕೆಯಲ್ಲಿ ಜಿಆರ್ ವಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿನಯ್ ಕಾಶಿ (@vinaykashy) ಇದನ್ನು ಟ್ವಿಟರ್ ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. "ಕಾರ್ಯಕ್ರಮದ ಸ್ಥಳಕ್ಕೆ ಬಂದ ಕೂಡಲೇ ರಾಹುಲ್ ದ್ರಾವಿಡ್ ಅವರನ್ನು ರಾಮ್ ಗುಹಾ ಸ್ವಾಗತಿಸಿದರು. ಆಗ ನನಗೆ ಹಾಗೂ ನನ್ನ ಸ್ನೇಹಿತ ಸಮೀರ್ ಗೆ ಇದು ರಾಹುಲ್ ದ್ರಾವಿಡ್ ಎನ್ನುವುದು ಅರ್ಥವಾಗಿತ್ತು. ದ್ರಾವಿಡ್ ಯಾವುದೇ ಹಮ್ಮು ಬಿಮ್ಮು ಇಲ್ಲದೆ, ಸೀದಾ ಹೋಗಿ ಕೊನೆಯ ಸೀಟ್ ನಲ್ಲಿ ಸಂತೋಷದಿಂದ ಕುಳಿತುಕೊಂಡರು. ದ್ರಾವಿಡ್ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯೊಬ್ಬಳಿಗೆ ತಾನು ಯಾರ ಪಕ್ಕದಲ್ಲಿದ್ದೇನೆ ಎನ್ನುವ ಸಣ್ಣ ಸೂಚನೆ ಕೂಡ ಇರಲಿಲ್ಲ' ಎಂದು ಬರೆದುಕೊಂಡಿದ್ದಾರೆ.
'ಸಮಾರಂಭದ ಕೊನೆಯ ಹಂತದಲ್ಲಿ ಸ್ವತಃ ಜಿಆರ್ ವಿ ಅವರು ಒತ್ತಾಯಪೂರ್ವಕವಾಗಿ ರಾಹುಲ್ ದ್ರಾವಿಡ್ ಅವರಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಈ ವೇಳೆ, ಕೆಲವೊಬ್ಬರಿಗೆ ನಾವು ಸರಿಯಾಗಿ ಆಟೋಗ್ರಾಫ್ ಹಾಕೋಕೆ ಆಗ್ಲಿಲ್ಲ, ಯಾಕೆಂದರೆ ನನಗೆ ಅಲ್ಲಿ ಸರಿಯಾಗಿ ನಿಂತುಕೊಳ್ಳೋದಕ್ಕೂ ಜನ ಬಿಡಲಿಲ್ಲ ಎಂದು ತಮಾಷೆಯಾಗಿ ಹೇಳಿದ್ದರು. ಯಾಕೆಂದರೆ, ರಾಹುಲ್ ದ್ರಾವಿಡ್, ನಿಂತಲ್ಲೇ ಅಂದಾಜು 50 ಪುಸ್ತಕಗಳಿಗೆ ಆಟೋಗ್ರಾಫ್ ಹಾಕಿದ್ದರು ಎಂದು ಬರೆದುಕೊಂಡಿದ್ದಾರೆ.
ಕೊನೆಯಲ್ಲಿ ವೇದಿಕೆಯಲ್ಲಿದ್ದ ಹಲವರು ದ್ರಾವಿಡ್ ಬಗ್ಗೆ ಮಾತನಾಡಲು ಆರಂಭಿಸಿದಾಗ, ಜನರು ನನ್ನ ಬಗ್ಗೆ ಮಾತನಾಡುವುದಕ್ಕಿಂತ ಬದಲು ಜಿಆರ್ ವಿ ಬಗ್ಗೆ ಮಾತನಾಡಬೇಕು. ಇದು ಅವರನ್ನು ಸಂಭ್ರಮಿಸುವ ಕಾರ್ಯಕ್ರಮ ಎಂದಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ಆಟಗಾರನೊಬ್ಬ ಇಷ್ಟು ಸೀದಾಸಾದಾ ಇರುವುದಕ್ಕೆ ಹೇಗೆ ಸಾಧ್ಯ ಎಂದೂ ವಿನಯ್ ಕಾಶಿ ಪ್ರಶ್ನೆ ಮಾಡಿದ್ದಾರೆ.
ಸೆಲಿಬ್ರಿಟಿಯಾಗಿರುವ ವ್ಯಕ್ತಿಯೊಬ್ಬ ಸಾಮಾನ್ಯ ಪ್ರಜೆಯಾಗಿ ಬದುಕುವುದು ಸುಲಭವಲ್ಲ. ಆದರೆ, ರಾಹುಲ್ ದ್ರಾವಿಡ್ ರಂಥ ಕ್ರಿಕೆಟ್ ದಿಗ್ಗಜ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ವ್ಯಕ್ತಿಯ ಸರಳತೆಗೆ ಅಭಿಮಾನಿಗಳು ಮನಸೋತಿದ್ದಾರೆ.
ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ಅದ್ಭುತ ಕೆಲಸ ಮಾಡುತ್ತಿದ್ದಾರೆ: ಸೌರವ್ ಗಂಗೂಲಿ
ರಾಹುಲ್ ದ್ರಾವಿಡ್ ಅವರ ಈ ಚಿತ್ರವನ್ನು ಟ್ವೀಟ್ ಮಾಡಿದ ವಿನಯ್ ಕಾಶಿ, ನಂತರ ಸ್ವತಃ ರಾಹುಲ್ ದ್ರಾವಿಡ್ ಅವರೊಂದಿಗೆ ಸೆಲ್ಫಿ ಕ್ಲಿಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ರಾಹುಲ್ ದ್ರಾವಿಡ್ ಅವರ ಈ ವರ್ತನೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಲ್ಲದೆ, ದ್ರಾವಿಡ್ ಅವರ ಕುರಿತಾಗಿ ಹೆಮ್ಮೆ ಪಡಲು ಇದು ಮತ್ತೊಂದು ಕಾರಣ ಎಂದೂ ಕಾಮೆಂಟ್ ಮಾಡಿದ್ದಾರೆ.
Wriddhiman Saha: ದಾದಾ, ದ್ರಾವಿಡ್ ಮೇಲೆ ಗಂಭೀರವಾಗಿ ಆರೋಪಿಸಿದ ವೃದ್ದಿಮಾನ್ ಸಾಹ..!
ರಾಹುಲ್ ದ್ರಾವಿಡ್ ಅವರ ಸರಳತೆ ಚರ್ಚೆಯ ವಿಷಯವಾಗುತ್ತಿರುವುದು ಇದೇ ಮೊದಲಲ್ಲ. ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಆಗಾಗ್ಗೆ ಅದೇ ರೀತಿ ಸರಳ ಜೀವನದಿಂದ ಗುರುತಿಸಲ್ಪಡುತ್ತಾರೆ. ಯಾವ ಹಿಂಜರಿಕೆ ಇಲ್ಲದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಲಸ ಮಾಡಿದರು. ಅಂಡರ್-19 ತಂಡದೊಂದಿಗೆ ತೆರೆಮರೆಯಲ್ಲಿ ಕೆಲಸ ಮಾಡಿದ ಅವರು ಇದೀಗ ಟೀಮ್ ಇಂಡಿಯಾಕ್ಕಾಗಿಯೂ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.