ಅಹಮದಾಬಾದ್(ಡಿ.25): ಭಾರತ ಪುರುಷರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 

ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿರುವುದರ ಆಧಾರದ ಮೇಲೆ ಸುನಿಲ್ ಜೋಶಿ ಬದಲು ಚೇತನ್ ಶರ್ಮಾ ಅವರಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆ ದೊರೆತಿದೆ. ಇದೇ ವೇಳೆ ಐವರು ಸದಸ್ಯರ ಆಯ್ಕೆ ಸಮಿತಿಗೆ ಮಾಜಿ ವೇಗಿಗಳಾದ ಅಭಯ್ ಕುರುವಿಲ್ಲಾ ಹಾಗೂ ದೇಬಾಶಿಶ್ ಮೊಹಂತಿ ಸಹ ಸೇರ್ಪಡೆಯಾಗಿದ್ದಾರೆ.

2022ರ ಐಪಿಎಲ್‌ಗೆ 10 ತಂಡಗಳು ಎಂಟ್ರಿ

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಒಂದಷ್ಟು ಹೈಲೈಟ್ಸ್‌ 

ಆರ್ಥಿಕ ನೆರವು: ಕೋವಿಡ್‌-19 ಹಿನ್ನೆಲೆಯಲ್ಲಿ ಈ ವರ್ಷ ದೇಸಿ ಋುತು ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ ನೂರಾರು ದೇಸಿ ಕ್ರಿಕೆಟಿಗರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಬಿಸಿಸಿಐ ತಿಳಿಸಿದೆ.

900 ಕೋಟಿ ನಷ್ಟ ಭೀತಿ: 

2021ರಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ತೆರಿಗೆ ವಿನಾಯಿತಿ ಕೊಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಒಂದೊಮ್ಮೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡದಿದ್ದರೆ, 900 ಕೋಟಿ ರು. (123 ಮಿಲಿಯನ್‌ ಡಾಲರ್‌) ಆದಾಯ ಖೋತ ಆಗಲಿದೆ ಎಂದು ಬಿಸಿಸಿಐ ಆತಂಕ ವ್ಯಕ್ತಪಡಿಸಿದೆ. 

ಐಸಿಸಿ ಗಳಿಕೆಯಲ್ಲಿ ಪ್ರತಿ ವರ್ಷ ಬಿಸಿಸಿಐಗೆ ಪಾಲು ಸಿಗಲಿದೆ. ಅಂದರೆ ಅಂದಾಜು 2,866 ಕೋಟಿ ರು. (390 ಮಿಲಿಯನ್‌ ಡಾಲರ್‌) ಸಿಗಲಿದ್ದು, ತೆರಿಗೆ ವಿನಾಯಿತಿ ಕೊಡಿಸದಿದ್ದರೆ, ಇದರಲ್ಲಿ 900 ಕೋಟಿ ಕಡಿತಗೊಳಿಸುವುದಾಗಿ ಐಸಿಸಿ ತಿಳಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.