ಅಹಮದಾಬಾದ್(ಡಿ.24): ಮುಂಬರುವ 2022ರ ಐಪಿಎಲ್ ಟೂರ್ನಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆ ಮಾಡಿಕೊಳ್ಳಲು ಬಿಸಿಸಿಐ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಅಹಮದಾಬಾದ್‌ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ಹಿಂದಿನಿಂದಲೂ ಕ್ರೀಡಾ ಮಹಾಜಾತ್ರೆ ಎನಿಸಿಕೊಂಡಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ರಾಹುಲ್ ದ್ರಾವಿಡ್ ಸಹ ಈ ವಾದಕ್ಕೆ ಧ್ವನಿಗೂಡಿಸಿದ್ದರು. ಇದೇ ವೇಳೆ ಸಾಮಾನ್ಯ ಸಭೆಯಲ್ಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಟಿ20 ಮಾದರಿಯ ಕ್ರಿಕೆಟ್‌ ಸೇರ್ಪಡೆಗೆ ಬಿಡ್‌ ಸಲ್ಲಿಸಬೇಕು ಎನ್ನುವ ಮಹತ್ವದ ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಬಿಸಿಸಿಐ ಪ್ರಧಾನ ವ್ಯವಸ್ಥಾಪಕ ಕೆವಿಪಿ ರಾವ್ ತಲೆದಂಡ

2022ರ ಐಪಿಎಲ್ ಟೂರ್ನಿಗೆ ಹೊಸದಾಗಿ ಎರಡು ತಂಡಗಳನ್ನು ಸೇರ್ಪಡೆಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ಖಚಿತಪಡಿಸಿವೆ ಎಂದು ವರದಿಯಾಗಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಲಿವೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಸಮಯದ ಅಭಾವ ಇರುವುದರಿಂದ ಈ ತೀರ್ಮಾನವನ್ನು ಒಂದು ವರ್ಷಕ್ಕೆ ಮುಂದೂಡಲಾಗಿದೆ.

ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಪ್ರಧಾನ ವ್ಯವಸ್ಥಾಪಕ ಕೆವಿಪಿ ರಾವ್‌ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಇನ್ನು ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ರಾಜೀವ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ.