ತವರಿನಲ್ಲಿ ಮತ್ತೊಂದು ಜಯಕ್ಕೆ ಟೀಂ ಇಂಡಿಯಾ ಕಾತರ..!
ಟೀಂ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದ್ದು, ಮತ್ತೊಂದು ಟೆಸ್ಟ್ ಸರಣಿ ಗೆಲುವಿನ ಕನವರಿಕೆಯಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚೆನ್ನೈ(ಫೆ.04): ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಒಂದು ದಿನ ಬಾಕಿ ಇದೆ. ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದು ಬಂದಿರುವ ಟೀಂ ಇಂಡಿಯಾ, ತವರಿನಲ್ಲಿ ಮತ್ತೊಂದು ಯಶಸ್ವಿ ಪ್ರದರ್ಶನ ತೋರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವ ವಿಶ್ವಾಸದಲ್ಲಿದೆ. ಕಳೆದ 9 ವರ್ಷದಲ್ಲಿ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಭಾರತವೇ ಈ ಸರಣಿಯನ್ನೂ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ಭಾರತ ಕೊನೆ ಬಾರಿಗೆ ತವರಿನಲ್ಲಿ ಸರಣಿ ಸೋತಿದ್ದು 2012ರಲ್ಲಿ. ಅದೂ ಇಂಗ್ಲೆಂಡ್ ವಿರುದ್ಧವೇ. 4 ಪಂದ್ಯಗಳ ಸರಣಿಯನ್ನು ಭಾರತ 1-2ರ ಅಂತರದಲ್ಲಿ ಕೈಚೆಲ್ಲಿತ್ತು. ಅದಾದ ಬಳಿಕ ಭಾರತ ತವರು ನೆಲದಲ್ಲಿ ಟೆಸ್ಟ್ ಸರಣಿ ಸೋತಿಲ್ಲ. ಸತತ 12 ಸರಣಿಗಳಲ್ಲಿ ಭಾರತ ವಿಜಯ ಪತಾಕೆ ಹಾರಿಸಿದೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್: ಫೈನಲ್‌ಗೆ ನ್ಯೂಜಿಲೆಂಡ್ ಲಗ್ಗೆ..!
ಭಾರತ ತಂಡ 2013ರಿಂದ 2020ರ ವರೆಗೂ ತವರಿನಲ್ಲಿ ಒಟ್ಟು 34 ಟೆಸ್ಟ್‌ಗಳನ್ನು ಆಡಿದ್ದು, ಬರೋಬ್ಬರಿ 28 ಗೆಲುವು ಸಾಧಿಸಿದೆ. ಕೇವಲ 1 ಪಂದ್ಯದಲ್ಲಿ ಮಾತ್ರ ಸೋಲು ಕಂಡಿರುವ ಭಾರತ, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 2016-17ರಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಆಗಮಿಸಿದ್ದಾಗ 5 ಪಂದ್ಯಗಳ ಸರಣಿಯನ್ನು ಭಾರತ 4-0 ಅಂತರದಲ್ಲಿ ಜಯಿಸಿ ಸಂಭ್ರಮಿಸಿತ್ತು. ಅದೇ ರೀತಿಯ ಪ್ರದರ್ಶನವನ್ನು ಮತ್ತೆ ತೋರಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗಿದೆ.
ಕೊಹ್ಲಿ ಇದ್ದರೆ ನನ್ನ ಕೆಲಸ ಸುಲಭ: ಅಜಿಂಕ್ಯ
ಚೆನ್ನೈ: ಆಸ್ಪ್ರೇಲಿಯಾದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಕೊಹ್ಲಿ ಇದ್ದಾಗ ತಮ್ಮ ಕೆಲಸ ಸುಲಭ ಎಂದಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ , ‘ಕೊಹ್ಲಿ ಕೇಳಿದಾಗ ಇಲ್ಲವೇ ಏನಾದರೂ ಹೇಳಬೇಕು ಎನಿಸಿದಾಗ ಆಷ್ಟೇ ನಾನು ಹೇಳುತ್ತೇನೆ. ಉಪನಾಯಕನಾಗಿ ನಾಯಕನಿಗೆ ಸಹಕರಿಸುವುದು ನನ್ನ ಮೇಲಿರುವ ಜವಾಬ್ದಾರಿ’ ಎಂದರು.