ಕಿವೀಸ್ ಟೆಸ್ಟ್‌ಗೆ ಟೀಂ ಇಂಡಿಯಾ ರೆಡಿ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?
ಭಾರತ-ನ್ಯೂಜಿಲೆಂಡ್ ತಂಡಗಳು ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿವೆ. ಮೊದಲ ಪಂದ್ಯಕ್ಕೆ ಇಲ್ಲಿನ ಬೇಸಿನ್ ರಿಸರ್ವ್ ಕ್ರೀಡಾಂಗಣ ಆತಿಥ್ಯ ನೀಡಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ವೆಲ್ಲಿಂಗ್ಟನ್(ಫೆ.20): ಟಿ20 ವಿಶ್ವಕಪ್ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದ ಟೀಂ ಇಂಡಿಯಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ 2 ಪಂದ್ಯಗಳ ಟೆಸ್ಟ್ ಸರಣಿಯನ್ನೂ ಗೆದ್ದು, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ. 2 ಪಂದ್ಯಗಳ ಸರಣಿಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯಕ್ಕೆ ಇಲ್ಲಿನ ಬೇಸಿನ್ ರಿಸರ್ವ್ ಕ್ರೀಡಾಂಗಣ ಆತಿಥ್ಯ ನೀಡಲಿದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 7 ಪಂದ್ಯಗಳನ್ನು ಆಡಿರುವ ಭಾರತ 7ರಲ್ಲೂ ಗೆದ್ದು, ಬರೋಬ್ಬರಿ 360 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಿವೀಸ್ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಭಾರತಕ್ಕೆ 120 ಅಂಕಗಳು ದೊರೆಯಲಿದ್ದು, 2021ರಲ್ಲಿ ನಡೆಯಲಿರುವ ಫೈನಲ್‌ಗೆ ಪ್ರವೇಶಿಸಲು ಅನುಕೂಲವಾಗಲಿದೆ.
ಪಂತ್ ಬಳಿಯಿದ್ದ ಮತ್ತೊಂದು ಕೆಲಸವನ್ನೂ ಕಿತ್ತುಕೊಂಡ ರಾಹುಲ್..!
ಮತ್ತೊಂದೆಡೆ ನ್ಯೂಜಿಲೆಂಡ್ ತಾನಾಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, ಕೇವಲ 1 ಗೆಲುವಿನೊಂದಿಗೆ 60 ಅಂಕ ಹೊಂದಿದೆ. ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಭಾರತ ವಿರುದ್ಧದ ಸರಣಿ ಕಿವೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ 120 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಳ್ಳುವುದು ಕೇನ್ ವಿಲಿಯಮ್ಸನ್ ಪಡೆಯ ಗುರಿಯಾಗಿದೆ.
ತಂಡ ಸಂಯೋಜನೆ ಹೇಗಿರಲಿದೆ?: ಮಯಾಂಕ್ ಅಗರ್‌ವಾಲ್ ಹಾಗೂ ಪೃಥ್ವಿ ಶಾ ಆರಂಭಿಕರಾಗಿ ಆಡುವುದು ಬಹುತೇಕ ಖಚಿತವಾಗಿದೆ. ಅಭ್ಯಾಸ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡಿದ್ದ ಶುಭ್‌ಮನ್ ಗಿಲ್, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಮತ್ತಷ್ಟು ಸಮಯ ಕಾಯಬೇಕಿದೆ. ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಕ್ರಮವಾಗಿ 3, 4 ಹಾಗೂ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹನುಮ ವಿಹಾರಿ ಹೆಚ್ಚುವರಿ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದು, 5ನೇ ಬೌಲರ್ ಪಾತ್ರವನ್ನೂ ನಿರ್ವಹಿಸಲಿದ್ದಾರೆ. ವೃದ್ಧಿಮಾನ್ ಸಾಹ ವಿಕೆಟ್ ಕೀಪರ್ ಆಗಿ ಆಡಿದರೆ, ಏಕೈಕ ಸ್ಪಿನ್ನರ್ ಸ್ಥಾನಕ್ಕೆ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನಡುವೆ ಸ್ಪರ್ಧೆ ಇದೆ. ಇಶಾಂತ್ ಶರ್ಮಾ ಫಿಟ್ ಆಗಿದ್ದಾರೆ ಎಂದು ಕೊಹ್ಲಿ ಖಚಿತಪಡಿಸಿದ್ದು, ಅವರು ಕಣಕ್ಕಿಳಿಯುವ ಬಗ್ಗೆ ಸುಳಿವು ನೀಡಿದ್ದಾರೆ. ಮೊಹಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಸಹಜವಾಗಿಯೇ ತಂಡದಲ್ಲಿರಲಿದ್ದಾರೆ.
52 ವರ್ಷಗಳ ಹಳೇ ದಾಖಲೆ ಸರಿಗಟ್ಟಲು ಸಜ್ಜಾದ ವಿರಾಟ್!
ಕಿವೀಸ್‌ಗಿಲ್ಲ ಆಯ್ಕೆ ಗೊಂದಲ: ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆ ಗೊಂದಲಗಳಿಲ್ಲ. ಟಾಮ್ ಬಂಡ್ಲೆಲ್ ಹಾಗೂ ಟಾಮ್ ಲೇಥಮ್ ಆರಂಭಿಕರಾಗಿ ಆಡಲಿದ್ದು, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಬಿ.ಜೆ.ವ್ಯಾಟ್ಲಿಂಗ್ ವಿಕೆಟ್ ಕೀಪರ್ ಆಗಿ ಆಡಲಿದ್ದು, ಕಾಲಿನ್ ಡಿ ಗ್ರಾಂಡ್‌ಹೋಮ್ ಆಲ್ರೌಂಡರ್ ಸ್ಥಾನ ಪಡೆಯಲಿದ್ದಾರೆ. ಟ್ರೆಂಟ್ ಬೌಲ್ಟ್, ಟಿಮ್ ಸೌಥಿಗೆ ಸ್ಥಾನ ಸಿಗಲಿದೆ. ವೇಗಿ ನೀಲ್ ವ್ಯಾಗ್ನರ್ ಗಾಯಗೊಂಡಿದ್ದು, ಒಂದೊಮ್ಮೆ ಅವರು ಚೇತರಿಸಿಕೊಳ್ಳದಿದ್ದರೆ ಮ್ಯಾಟ್ ಹೆನ್ರಿ ಇಲ್ಲವೇ ಕೈಲ್ ಜ್ಯಾಮಿಸನ್‌ರನ್ನು ಆಡಿಸಲಾಗುತ್ತದೆ. ಏಕೈಕ ಸ್ಪಿನ್ನರ್ ಆಗಿ ಅಜಾಜ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ ಕಳಪೆ ದಾಖಲೆ ಹೊಂದಿದೆ ಭಾರತ
ನ್ಯೂಜಿಲೆಂಡ್ ನೆಲದಲ್ಲಿ ಭಾರತದ ದಾಖಲೆ ಹೇಳಿಕೊಳ್ಳುವಂತದ್ದಲ್ಲ. ಅಲ್ಲಿ ಆಡಿರುವ 23 ಟೆಸ್ಟ್‌ಗಳಲ್ಲಿ 5ರಲ್ಲಿ ಮಾತ್ರ ಗೆದ್ದಿರುವ ಭಾರತ, 8ರಲ್ಲಿ ಸೋಲುಂಡಿದೆ. 10 ಪಂದ್ಯಗಳು ಡ್ರಾಗೊಂಡಿವೆ. ವೆಲ್ಲಿಂಗ್ಟನ್‌ನಲ್ಲಿ 8 ಪಂದ್ಯಗಳನ್ನು ಆಡಿದ್ದು 1ರಲ್ಲಿ ಮಾತ್ರ ಜಯಿಸಿದೆ. ಭಾರತ ಇಲ್ಲಿ ಗೆದ್ದಿದ್ದು 1968ರಲ್ಲಿ.
ಇನ್ನೂ 3 ವರ್ಷ ಎಲ್ಲಾ ಮಾದರಿಯಲ್ಲಿ ಕೊಹ್ಲಿ ಆಟ!
ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ದಣಿಯುತ್ತಿದ್ದರೂ, ಇನ್ನೂ 3 ವರ್ಷಗಳ ಕಾಲ ಎಲ್ಲಾ ಮೂರು ಮಾದರಿಯಲ್ಲಿ ಆಡುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ, 2021ರ ಟಿ20 ವಿಶ್ವಕಪ್ ಬಳಿಕ ಯಾವುದಾದರೂ ಒಂದು ಮಾದರಿಗೆ ನಿವೃತ್ತಿ ಘೋಷಿಸುತ್ತೀರಾ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್, ‘ಅತ್ಯಂತ ಕಠಿಣ 3 ವರ್ಷಕ್ಕೆ ಸಿದ್ಧನಾಗುತ್ತಿದ್ದೇನೆ. ನನ್ನ ಗುರಿ ದೊಡ್ಡದಿದೆ. 3 ವರ್ಷಗಳ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ. ಅಲ್ಲಿಯ ವರೆಗೂ ಎಲ್ಲಾ ಮೂರು ಮಾದರಿಯಲ್ಲಿ ಸಕ್ರಿಯನಾಗಿರುತ್ತೇನೆ’ ಎಂದರು. ವರ್ಷದಲ್ಲಿ ಸುಮಾರು 300 ದಿನಗಳ ಕಾಲ ಆಟದಲ್ಲಿ ತೊಡಗಿಸಿಕೊಳ್ಳುವುದರಿಂದ ಸಹಜವಾಗಿಯೇ ದಣಿಯುತ್ತಿರುವುದಾಗಿ ಕೊಹ್ಲಿ ಒಪ್ಪಿಕೊಂಡರು.
ಪಿಚ್ ರಿಪೋರ್ಟ್
ಬೇಸಿನ್ ರಿಸರ್ವ್ ಪಿಚ್ ಡ್ರಾಪ್ ಇನ್ ಪಿಚ್ ಆಗಿದ್ದು, ಹೆಚ್ಚು ಹುಲ್ಲಿದೆ. ವೆಲ್ಲಿಂಗ್ಟನ್‌ನಲ್ಲಿ ಅತಿಯಾದ ಗಾಳಿ ಇರಲಿದ್ದು, ಸ್ವಿಂಗ್ ಬೌಲಿಂಗ್‌ಗೆ ಸಹಕಾರಿಯಾಗಲಿದೆ. ಪಿಚ್ ಗಟ್ಟಿಇರಲಿದ್ದು, ರನ್ ಗಳಿಸುವುದು ಸುಲಭವಾಗಲಿದೆ. ಸ್ಪಿನ್ನರ್‌ಗಳಿಗೆ ನೆರವು ಸಿಗುವುದಿಲ್ಲ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಮಯಾಂಕ್ ಅಗರ್‌ವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಾಹ, ಅಶ್ವಿನ್/ಜಡೇಜಾ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ.
ನ್ಯೂಜಿಲೆಂಡ್: ಟಾಮ್ ಬ್ಲಂಡೆಲ್, ಟಾಮ್ ಲೇಥಮ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ.ವ್ಯಾಟ್ಲಿಂಗ್, ಕಾಲಿನ್ ಡಿ ಗ್ರಾಂಡ್‌ಹೋಮ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್.
ಪಂದ್ಯ ಆರಂಭ: ಬೆಳಗ್ಗಿನ ಜಾವ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1