ವೃದ್ದಿಮಾನ್ ಸಾಹ ಕೋವಿಡ್‌ನಿಂದ ಗುಣಮುಖ; ಇಂಗ್ಲೆಂಡ್ ಪ್ರವಾಸಕ್ಕೆ ಲಭ್ಯ
* ಕೋವಿಡ್ ಸೋಂಕಿನಿಂದ ವೃದ್ದಿಮಾನ್ ಸಾಹಾ ಗುಣಮುಖ
* ಐಪಿಎಲ್ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಾಹಗೆ ಕೋವಿಡ್ ಸೋಂಕು ತಗುಲಿತ್ತು.
* ವೃದ್ದಿಮಾನ್ ಸಾಹ ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ ಲಭ್ಯ
ನವದೆಹಲಿ(ಮೇ.18): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಕೋವಿಡ್ 19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ದದ ಪ್ರವಾಸಕ್ಕೆ ಲಭ್ಯರಾಗಿದ್ದಾರೆ.
36 ವರ್ಷದ ವೃದ್ದಿಮಾನ್ ಸಾಹ ಇತ್ತೀಚೆಗಷ್ಟೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಬಯೋ ಬಬಲ್‌ನೊಳಗಿದ್ದ ಸಾಹಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಬಳಿಕ ದೆಹಲಿಯಲ್ಲಿಯೇ ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ಒಳಗಾಗಿ, ಕೋವಿಡ್ ಮಣಿಸಿ ಇದೀಗ ಕೋಲ್ಕತದಲ್ಲಿರುವ ತಮ್ಮ ಮನೆಗೆ ವಾಪಾಸಾಗಿದ್ದಾರೆ.
ದೆಹಲಿಯಲ್ಲಿ ಬರೋಬ್ಬರಿ ಎರಡುವರೆ ವಾರಗಳ ಕಾಲ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದ ವೃದ್ದಿಮಾನ್ ಸಾಹ ನಿನ್ನೆಯಷ್ಟೇ ಮನೆಗೆ ವಾಪಾಸಾಗಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಪಿಟಿಐಗೆ ಖಚಿತಪಡಿಸಿವೆ.
ಐಪಿಎಲ್ 2021: 'ಆಸ್ಟ್ರೇಲಿಯಾ ಆಟಗಾರರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ'
ಇದೀಗ RT-PCR ಟೆಸ್ಟ್‌ನಲ್ಲಿ ಸಾಹಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದರಷ್ಟೇ ಮುಂಬೈನಲ್ಲಿರುವ ಬಯೋ ಬಬಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿದೆ. ಬಯೋ ಬಬಲ್‌ನೊಳಗೆ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ.
ಇಂಗ್ಲೆಂಡ್ ಪ್ರವಾಸದ ಮೊದಲಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವು ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್ ಆತಿಥ್ಯವನ್ನು ವಹಿಸಲಿದೆ. ಇದಾದ ಬಳಿಕ ಆಗಸ್ಟ್ 04ರಿಂದ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ ಟೀಂ ಇಂಡಿಯಾ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona