"ಅನುಷ್ಕಾ ಭೇಟಿಯಾದಾಗ..": ತಮ್ಮ ಬದುಕಿಗೆ ತಿರುವು ಸಿಕ್ಕ ಕ್ಷಣವನ್ನು ಮೆಲುಕು ಹಾಕಿದ ವಿರಾಟ್ ಕೊಹ್ಲಿ..!
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮನದಾಳದ ಮಾತು
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹವಾಗಿರುವ ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಭೇಟಿಯಾಗಿದ್ದು ನನ್ನ ಲೈಫ್ ಚೇಂಜಿಂಗ್ ಕ್ಷಣವೆಂದ ಮಾಜಿ ನಾಯಕ
ಅಹಮದಾಬಾದ್(ಮಾ.11): ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿರಾಟ್ ಕೊಹ್ಲಿಯ ಕ್ರಿಕೆಟ್ ಜರ್ನಿಯೇ ಹಲವರ ಪಾಲಿಗೆ ಸ್ಪೂರ್ತಿದಾಯಕ ಕಥೆ. ಟೀಂ ಇಂಡಿಯಾದ ಅತ್ಯಂತ ಫಿಟ್ನೆಸ್ ಹೊಂದಿದ ಆಟಗಾರರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ವಿರಾಟ್ ಕೊಹ್ಲಿ, ಇದೀಗ ತಮ್ಮ ಬದುಕಿಗೆ ತಿರುವು ಸಿಕ್ಕ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ಹೌದು, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ತಮ್ಮ ಕ್ರಿಕೆಟ್ ಬದುಕಿನಲ್ಲಿ ಹಲವು ಸವಾಲುಗಳನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನೇ ಏರಿದ್ದಾರೆ. ಇದೀಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಭೇಟಿಯಾಗಿದ್ದು, ಆ ಬಳಿಕ ಆಕೆಯನ್ನು ಪ್ರೀತಿಸಿ ವಿವಾಹವಾಗಿದ್ದು, ತಮ್ಮ ಬದುಕಿನ ಮಹತ್ವದ ಕ್ಷಣ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪಾಡ್‌ಕಾಸ್ಟ್ ಬಿಡುಗಡೆ ಮಾಡಿರುವ ಹೊಸ ಎಪಿಸೋಡ್‌ನಲ್ಲಿ ವಿರಾಟ್ ಕೊಹ್ಲಿ, ತಮ್ಮ ಜೀವನದಲ್ಲಿ ಸಂಭವಿಸಿದ ಕೆಲವು ಮಹತ್ವದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ತಂದೆಯ ನಿಧನದ ನಂತರ ತಮ್ಮ ಕ್ರಿಕೆಟ್ ಬದುಕು ಏನಾಯ್ತು? ಇದಾದ ನಂತರದ ಘಟನೆಗಳೇನು ಎನ್ನುವುದನ್ನು ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
Ahmedabad Test: ಅಪರೂಪದ ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ - ರವಿಚಂದ್ರನ್ ಅಶ್ವಿನ್..!
" ನನ್ನ ತಂದೆಯ ನಿಧನದ ನಂತರ, ಒಂದು ರೀತಿ ನಾನು ಹೊರಜಗತ್ತನ್ನು ನೋಡುವ ರೀತಿ ಬದಲಾಯಿತು. ಆದರೆ ನನ್ನೊಳಗಿನ ಬದುಕಿನಲ್ಲಿ ಹೆಚ್ಚಿನ ಬದಲಾವಣೆಗಳೇನು ಆಗಲಿಲ್ಲ. ಹಿಂದಿನ ರೀತಿಯಲ್ಲಿಯೇ ಜೀವನ ನಡೆಯುತ್ತಿತ್ತು. ಈ ಘಟನೆಯ ಬಳಿಕ ನನ್ನಲ್ಲಿ ಪುಟಿದೇಳುವ ಸ್ವಭಾವ ಮತ್ತಷ್ಟು ಗಟ್ಟಿಯಾಯಿತು. ಇದರ ಜತೆಗೆ ನನ್ನ ಬದುಕಿನಲ್ಲಿ ನಾನೇನು ಸಾಧಿಸಬೇಕು ಎನ್ನುವ ಕಡೆ ನನ್ನ ಗಮನ ಕೇಂದ್ರೀಕೃತವಾಯಿತು. ನನ್ನ ಕನಸು ಈಡೇರಿಸಿಕೊಳ್ಳಲು, ಮತ್ತಷ್ಟು ಪ್ರೇರಣೆ ಪಡೆದುಕೊಂಡೆ. ಆದರೆ ಹೀಗಿದ್ದೂ ನನ್ನ ಬದುಕಿನಲ್ಲಿ ಹೆಚ್ಚೇನು ಬದಲಾವಣೆಯಾಗಲಿಲ್ಲ. ನಾನು ಆ ಬಳಿಕವೂ ಕ್ರಿಕೆಟ್ ಆಡುವುದನ್ನು ಮುಂದುವರೆಸಿಕೊಂಡು ಹೋದೆ. ನಾನೇನು ಮಾಡಬೇಕೆಂದು ಇದ್ದೆನೋ ಅದನ್ನೇ ಮಾಡುತ್ತಿದ್ದೆ. ನನ್ನಲ್ಲಿ ಹೆಚ್ಚೇನು ಬದಲಾವಣೆಯಾಗಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇದಾದ ಬಳಿಕ ವಿರಾಟ್ ಕೊಹ್ಲಿ, ಬದುಕು ಬದಲಿಸಿದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. "ನಾನು ಅನುಷ್ಕಾ ಶರ್ಮಾ ಅವರನ್ನು ಭೇಟಿಯಾದಾಗ ನನ್ನ ಬದುಕಿನಲ್ಲಿ ಬದಲಾವಣೆಯನ್ನು ಕಂಡೆ. ಯಾಕೆಂದರೆ, ಜೀವನದ ಮತ್ತೊಂದು ಭಾಗ ನನ್ನ ಅರಿವಿಗೆ ಬಂದಿತು. ಇದು ಈ ಹಿಂದೆ ಇದ್ದಂತ ಜೀವನವಾಗಿರಲಿಲ್ಲ. ಇದು ಬೇರೆಯದ್ದೇ ದೃಷ್ಟಿಕೋನವನ್ನು ನೀಡಿತು. ಈ ಕಾರಣಕ್ಕಾಗಿಯೇ ಅನುಷ್ಕಾ ಶರ್ಮಾ ಸಿಕ್ಕಿದ್ದು ನನ್ನ ಪಾಲಿನ ಲೈಫ್ ಚೇಂಜಿಂಗ್ ಕ್ಷಣವೆಂದು ಹೇಳಿದ್ದು. ಯಾಕೆಂದರೆ ನೀವು ಪ್ರೀತಿಯಲ್ಲಿ ಬಿದ್ದಾಗ, ನಿಮ್ಮ ಜೀವನದಲ್ಲೇ ಸಾಕಷ್ಟು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುತ್ತೀರ. ಯಾಕೆಂದರೆ ನೀವಿಬ್ಬರೂ ಒಟ್ಟಿಗೆ ಸಾಗಬೇಕಾಗುತ್ತದೆ. ಹೀಗಾಗಿ ನೀವು ನಿಮ್ಮೊಳಗೆ ತೆರೆದುಕೊಳ್ಳಬೇಕಾಗುತ್ತದೆ. ಇನ್ನು ಹಲವು ಸಂಗತಿಗಳನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಇದೇ ನನ್ನ ಜೀವನ ಬದಲಿಸಿದ ಕ್ಷಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದಾದ ಬಳಿಕ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಏಕದಿನ ಸರಣಿಯ ಬಳಿಕ ವಿರಾಟ್ ಕೊಹ್ಲಿ, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ.