Ahmedabad Test: ಅಪರೂಪದ ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ - ರವಿಚಂದ್ರನ್ ಅಶ್ವಿನ್..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೆ ಅಹಮದಾಬಾದ್ ಆತಿಥ್ಯ
ಅಹಮದಾಬಾದ್ ಟೆಸ್ಟ್‌ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ವಿರಾಟ್-ಅಶ್ವಿನ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಹೊಸ್ತಿಲಲ್ಲಿ ರವಿಚಂದ್ರನ್ ಅಶ್ವಿನ್
ಅಹಮದಾಬಾದ್(ಮಾ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈ ಟೆಸ್ಟ್ ಪಂದ್ಯವು ಟೀಂ ಇಂಡಿಯಾ ಪಾಲಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಸಾಕಷ್ಟು ಮಹತ್ವದ್ದೆನಿಸಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್, ಕಳೆದ ಹಲವು ವರ್ಷಗಳಿಂದ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದರ ಜತೆಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತಷ್ಟು ಗರಿ ಸೇರಿಸಿಕೊಳ್ಳಲು ಸಜ್ಜಾಗಿದ್ದಾರೆ.
ಹೌದು, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರಿನ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ದೊಡ್ಡ ಮೊತ್ತದ ಇನಿಂಗ್ಸ್ ಆಡಲು ವಿಫಲವಾಗಿದ್ದಾರೆ. ಆದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಇನ್ನು ಕೇವಲ 42 ರನ್ ಬಾರಿಸಿದರೆ, ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಮಾತ್ರ ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 4000+ ರನ್ ಬಾರಿಸಿದ್ದಾರೆ.
ಒಂದು ವೇಳೆ ವಿರಾಟ್ ಕೊಹ್ಲಿ, ಅಹಮದಾಬಾದ್ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರೇ, ರಾಹುಲ್ ದ್ರಾವಿಡ್ ಹಾಗೂ ಸುನಿಲ್ ಗವಾಸ್ಕರ್ ಬಳಿಕ ಭಾರತದಲ್ಲಿ ಅತಿವೇಗವಾಗಿ 4000+ ರನ್ ಬಾರಿಸಿದ ಮೂರನೇ ಬ್ಯಾಟರ್ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.
Ahmedabad Test: ಆಸೀಸ್ ಪ್ರಧಾನಿ ಜತೆ ಮೋದಿ ಪಂದ್ಯ ವೀಕ್ಷಣೆ, ಮುಗಿಲು ಮುಟ್ಟಿದ ಮೋದಿ ಜಯಘೋಷ..!
ಇನ್ನು ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಈಗಾಗಲೇ ಕೊನೆಯ ಟೆಸ್ಟ್‌ನಲ್ಲಿ ಒಂದು ವಿಕೆಟ್ ಕಬಳಿಸಿದ್ದು, ಇನ್ನು ಕೇವಲ 9 ವಿಕೆಟ್ ಕಬಳಿಸಿದರರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 700 ವಿಕೆಟ್ ಕಬಳಿಸಿದ ಸಾಧನೆ ಮಾಡಲಿದ್ದಾರೆ. ಸದ್ಯ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 468 ವಿಕೆಟ್, ಏಕದಿನ ಕ್ರಿಕೆಟ್‌ನಲ್ಲಿ 151 ವಿಕೆಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ 72 ವಿಕೆಟ್ ಉರುಳಿಸಿದ್ದಾರೆ.
ಇನ್ನು ರವಿಚಂದ್ರನ್ ಅಶ್ವಿನ್ ಕೇವಲ 3 ವಿಕೆಟ್ ಕಬಳಿಸಿದರೇ, ಅನಿಲ್ ಕುಂಬ್ಳೆ ಹಿಂದಿಕ್ಕಿ ಆಸ್ಟ್ರೇಲಿಯಾ ಎದುರು ಅತಿಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ. ಜಂಬೋ ಖ್ಯಾತಿಯ ಕನ್ನಡಿಗ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 111 ವಿಕೆಟ್ ಕಬಳಿಸಿದ್ದಾರೆ. ಈ ದಾಖಲೆ ಅಹಮದಾಬಾದ್ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಪಾಲಾಗುವ ಸಾಧ್ಯತೆ ನಿಚ್ಚಳವಾಗಿದೆ.