* ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಆಗಿ ಮಿಂಚುತ್ತಿರುವ ವೆಂಕಟೇಶ್ ಅಯ್ಯರ್* ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ವೆಂಕಟೇಶ್ ಅಯ್ಯರ್ ಪರ ಬ್ಯಾಟ್ ಬೀಸಿದ ವಾಸೀಂ ಜಾಫರ್* ಹಾರ್ದಿಕ್ ಪಾಂಡ್ಯಗಿಂತ ವೆಂಕಟೇಶ್ ಅಯ್ಯರ್ ಬೆಸ್ಟ್ ಎಂದ ಮಾಜಿ ಕ್ರಿಕೆಟಿಗ
ಬೆಂಗಳೂರು(ಫೆ.22): ಮುಂಬರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾವು ಎಲ್ಲಾ ಹಳೆಯ ಕಹಿಘಟನೆಯನ್ನು ಮರೆತು ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ಯುಎಇನಲ್ಲಿ ನಡೆದ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವು ನಾಕೌಟ್ ಹಂತಕ್ಕೇರದೇ ಮುಖಭಂಗವನ್ನು ಅನುಭವಿಸಿತ್ತು. ಹೀಗಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿ ಈ ಹಿಂದೆ ಮಾಡಿದ ಎಡವಟ್ಟಿನಿಂದ ಪಾಠ ಕಲಿತಂತೆ ತೋರುತ್ತಿದ್ದು, ಸ್ಥಿರ ಪ್ರದರ್ಶನ ತೋರುವ ಆಟಗಾರರಿಗೆ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಮಣೆ ಹಾಕುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.
ಇದೀಗ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ (Wasim Jaffer) ಒಂದು ಹೆಜ್ಜೆ ಮುಂದೆ ಹೋಗಿ, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ವೆಂಕಟೇಶ್ ಅಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. 2019ರಲ್ಲಿ ಸೊಂಟ ನೋವಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್‌ನಲ್ಲಿ ಹೆಚ್ಚಿನ ಕಮಾಲ್ ಮಾಡಲು ಸಾಧ್ಯವಾಗಿಲ್ಲ. ಕೇವಲ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಮಾತ್ರ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯಗಿಂತ ವೆಂಕಟೇಶ್ ಅಯ್ಯರ್ ಉತ್ತಮ ಆಯ್ಕೆಯಾಗಬಲ್ಲರು ಎಂದಿದ್ದಾರೆ.
ಈ ಸಮಯದಲ್ಲಿ ಹೇಳಬೇಕೆಂದರೇ, ನನಗನಿಸುವ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರಿಗಿಂತ ವೆಂಕಟೇಶ್ ಅಯ್ಯರ್ ಒಂದು ಹೆಜ್ಜೆ ಮುಂದಿದ್ದಾರೆ. ಯಾಕೆಂದರೆ ಹಾರ್ದಿಕ್ ಪಾಂಡ್ಯ ಈಗ ಬೌಲಿಂಗ್ ಮಾಡುತ್ತಿದ್ದಾರೆಯೋ ಅಥವಾ ಅವರೆಷ್ಟು ಫಿಟ್ ಆಗಿದ್ದಾರೆ ಎನ್ನುವ ಕುರಿತಂತೆ ನನಗೆ ಮಾಹಿತಿಯಿಲ್ಲ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮಹತ್ವದ ಪಾತ್ರ ವಹಿಸಬಹುದು. ಆದರೆ ಸದ್ಯದ ಮಟ್ಟಿಗೆ ವೆಂಕಟೇಶ್ ಅಯ್ಯರ್, ಹಾರ್ದಿಕ್ ಪಾಂಡ್ಯ ಅವರಿಗಿಂತ ಮುಂದಿದ್ದಾರೆ ಎಂದು ESPNcricinfo ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
Ind vs SL: ಲಂಕಾ ಎದುರಿನ ಟಿ20 ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ವೇಗಿ ಔಟ್..?
ವೆಂಕಟೇಶ್ ಅಯ್ಯರ್ 6ನೇ ಕ್ರಮಾಂಕದಲ್ಲಿ ಯಾವ ರೀತಿ ಆಡುತ್ತಾರೆ ಎನ್ನುವುದರ ಬಗ್ಗೆ ಕುತೂಹಲವಿತ್ತು. ನಾವು ಆತನನ್ನು ಆರಂಭಿಕನಾಗಿ ನೋಡಿದ್ದೆವು. ಆದರೀಗ ಆತ ಆರನೇ ಕ್ರಮಾಂಕಕ್ಕೆ ಸುಲಭವಾಗಿ ಹೊಂದಿಕೊಂಡಿದ್ದಾರೆ. ಇದರ ಜತೆಗೆ ಅದ್ಭುತವಾಗಿ ಮ್ಯಾಚ್ ಫಿನೀಶ್ ಮಾಡುತ್ತಿದ್ದಾರೆ. ಇದರ ಜತೆಗೆ ಬೌಲಿಂಗ್ ಕೂಡಾ ಚೆನ್ನಾಗಿಯೇ ಮಾಡುತ್ತಿದ್ದಾರೆ. ವೆಂಕಟೇಶ್ ಅಯ್ಯರ್ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದರೆ ಖಂಡಿತವಾಗಿಯೂ ಉಪಯುಕ್ತ ಪ್ರದರ್ಶನ ತೋರಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ವಾಸೀಂ ಜಾಫರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ದ ಮುಕ್ತಾಯವಾದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ 92 ರನ್ ಬಾರಿಸಿದ್ದರು. ಮೊದಲ ಟಿ20 ಪಂದ್ಯದಲ್ಲಿ ಅಜೇಯ 24 ರನ್ ಬಾರಿಸಿದ್ದ ವೆಂಕಟೇಶ್ ಅಯ್ಯರ್ ಇದಾದ ಬಳಿಕ ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ ಸ್ಪೋಟಕ 33 ಮತ್ತು 35 ರನ್ ಬಾರಿಸಿದ್ದರು. ಈ ಮೂಲಕ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ವೆಂಕಟೇಶ್ ಅಯ್ಯರ್ ಕೂಡಾ ಮಹತ್ವದ ಪಾತ್ರವಹಿಸಿದ್ದರು. ವೆಂಕಟೇಶ್ ಅಯ್ಯರ್ ಇದೀಗ ಫೆಬ್ರವರಿ 24ರಿಂದ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾ ಆಲ್ರೌಂಡರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
