* ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕಿವೀಸ್ ಶುಭಾರಂಭ* ಧೋನಿ, ರೈನಾ ಹೆಸರಿನಲ್ಲಿದ್ದ ಟಿ20 ದಾಖಲೆ ಮುರಿದ ಸೂರ್ಯಕುಮಾರ್ ಯಾದವ್* ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ 5ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡ ಸೂರ್ಯ

ರಾಂಚಿ(ಜ.28): ಭಾರತ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. 2021ರ ಮಾರ್ಚ್‌ನಲ್ಲಿ ಇಂಗ್ಲೆಂಡ್ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸೂರ್ಯನಿಗೆ ಹಿಂತಿರುಗಿ ನೋಡುವ ಪ್ರಶ್ನೆಯೇ ಉದ್ಭವಿಸಲಿಲ್ಲ. 

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಗ್ರಶ್ರೇಯಾಂಕಿತ ಬ್ಯಾಟರ್‌ ಆಗಿ ಹೊರಹೊಮ್ಮಿರುವ ಸೂರ್ಯಕುಮಾರ್ ಯಾದವ್, ಕಳೆದ ವಾರವಷ್ಟೇ, 2022ನೇ ಸಾಲಿನ ಐಸಿಸಿ ವರ್ಷದ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದರು. ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕೇವಲ 34 ಎಸೆತಗಳಲ್ಲಿ 47 ರನ್‌ ಬಾರಿಸುವ ಮೂಲಕ, ಒಟ್ಟಾರೆ ರನ್‌ ಗಳಿಕೆಯಲ್ಲಿ ದೊಡ್ಡ ಜಿಗಿತ ಜಿಗಿದಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಹಾಗೂ ಎಂ ಎಸ್ ಧೋನಿಯವರನ್ನು ಹಿಂದಿಕ್ಕಿ, ಭಾರತ ಪರ 5ನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ಸೂರ್ಯಕುಮಾರ್ ಯಾದವ್, ಕೇವಲ 44 ಇನಿಂಗ್ಸ್‌ಗಳನ್ನಾಡಿ 46ರ ಸರಾಸರಿಯಲ್ಲಿ 1,625 ರನ್ ಬಾರಿಸಿದ್ದಾರೆ. ಇನ್ನು ಮತ್ತೊಂದೆಡೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, 98 ಪಂದ್ಯಗಳನ್ನಾಡಿ 1,617 ರನ್ ಬಾರಿಸಿದ್ದರೇ, ಸುರೇಶ್ ರೈನಾ 78 ಪಂದ್ಯಗಳನ್ನಾಡಿ 1,605 ರನ್ ಬಾರಿಸಿದ್ದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು:

1. ವಿರಾಟ್ ಕೊಹ್ಲಿ: 4,008
2. ರೋಹಿತ್ ಶರ್ಮಾ: 3,853
3. ಕೆ ಎಲ್ ರಾಹುಲ್: 2,265
4. ಶಿಖರ್ ಧವನ್: 1,759
5. ಸೂರ್ಯಕುಮಾರ್ ಯಾದವ್: 1,625

ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯದ ಬಗ್ಗೆ ಮಾತನಾಡುವುದಾದರೇ, ಏಕದಿನ ವಿಶ್ವಕಪ್‌ ವರ್ಷದಲ್ಲಿ ದ್ವಿಪಕ್ಷೀಯ ಟಿ20 ಸರಣಿ ಅಷ್ಟುಮಹತ್ವ ಪಡೆಯದಿದ್ದರೂ 2024ರ ಟಿ20 ವಿಶ್ವಕಪ್‌ ಸಿದ್ಧತೆಯಲ್ಲಿ ಭಾರತ ಸೂಕ್ತ ಆಟಗಾರರನ್ನು ಗುರುತಿಸುವಲ್ಲಿ ಎಡವುತ್ತಿದೆ ಅನಿಸುತ್ತಿದೆ. ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ಸಾಧಾರಣ ಪ್ರದರ್ಶನ ತೋರಿ 21 ರನ್‌ ಸೋಲು ಅನುಭವಿಸಿತು.

ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡುವ ನಿರ್ಧಾರ ತಕ್ಕ ಮಟ್ಟಿಗೆ ಕೈಹಿಡಿಯಿತಾದರೂ, ಕೊನೆ 4 ಓವರಲ್ಲಿ 53 ರನ್‌ ಬಿಟ್ಟುಕೊಟ್ಟು ಪಂದ್ಯದ ಮೇಲೆ ಸಾಧಿಸಿದ್ದ ಹಿಡಿತವನ್ನು ಕೈಚೆಲ್ಲಿತು. ಅದರಲ್ಲೂ ಅಶ್‌ರ್‍ದೀಪ್‌ ಸಿಂಗ್‌ರ ಕೊನೆ ಓವರಲ್ಲಿ 27 ರನ್‌ ಸಿಡಿಸಿದ ನ್ಯೂಜಿಲೆಂಡ್‌ 20 ಓವರಲ್ಲಿ 6 ವಿಕೆಟ್‌ಗೆ 176 ರನ್‌ ಗಳಿಸಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಇಬ್ಬನಿ ಬೀಳುವ ನಿರೀಕ್ಷೆ ಇದ್ದ ಕಾರಣ ಪವರ್‌-ಪ್ಲೇನಲ್ಲಿ ಮೇಲುಗೈ ಸಾಧಿಸಿದರಷ್ಟೇ ಗೆಲುವಿನ ಆಸೆ ಉಳಿಸಿಕೊಳ್ಳಲು ಸಾಧ್ಯ ಎನ್ನುವ ಅರಿವಿನೊಂದಿಗೆ ಬೌಲಿಂಗ್‌ ದಾಳಿಗಿಳಿದ ನ್ಯೂಜಿಲೆಂಡ್‌, 6 ಓವರಲ್ಲಿ ಭಾರತದ 3 ವಿಕೆಟ್‌ ಕಬಳಿಸಿ ಕೇವಲ 33 ರನ್‌ ಬಿಟ್ಟುಕೊಟ್ಟಿತು. ಇದರಲ್ಲಿ 6ನೇ ಓವರ್‌ ಮೇಡನ್‌ ಸಹ ಆಗಿದ್ದು ಗಮನಾರ್ಹ.

ಆ ಬಳಿಕ ಸೂರ್ಯಕುಮಾರ್‌(47) ಹಾಗೂ ಹಾರ್ದಿಕ್‌(21) ಹೋರಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಹಸ ಮಾಡಲು ಯತ್ನಿಸಿದರೂ ಕಿವೀಸ್‌ ಸ್ಪಿನ್ನರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ. ಪವರ್‌-ಪ್ಲೇನಲ್ಲೇ ತಲಾ ಒಂದು ವಿಕೆಟ್‌ ಕಿತ್ತಿದ್ದ ಸ್ಯಾಂಟ್ನರ್‌ ಹಾಗೂ ಬ್ರೇಸ್‌ವೆಲ್‌ ಜೊತೆ ಇಶ್‌ ಸೋಧಿ ಸಹ ಭಾರತೀಯರನ್ನು ಕಾಡಿದರು. 16ನೇ ಓವರಲ್ಲಿ 111 ರನ್‌ ಆಗಿದ್ದಾಗ ಹೂಡಾ ಔಟಾಗುತ್ತಿದ್ದಂತೆ ಭಾರತದ ಜಯದ ಆಸೆ ಕಮರಿತು. ವಾಷಿಂಗ್ಟನ್‌ ಸುಂದರ್‌ 28 ಎಸೆತದಲ್ಲಿ 50 ರನ್‌ ಸಿಡಿಸಿ ಭಾರತ ಆಲೌಟ್‌ ಆಗುವುದನ್ನು ತಪ್ಪಿಸುವ ಜೊತೆಗೆ ಸೋಲಿನ ಅಂತರವನ್ನೂ ತಗ್ಗಿಸಿದರು. ಭಾರತ 9 ವಿಕೆಟ್‌ಗೆ 155 ರನ್‌ ಗಳಿಸಿತು.

Border-Gavaskar Trophy: ವಿರಾಟ್ ಕೊಹ್ಲಿಯೇ ನಮ್ಮ ಪಾಲಿಗೆ ಅತಿದೊಡ್ಡ ಭೀತಿ ಎಂದ ಆಸೀಸ್ ಸ್ಟಾರ್ ಆಲ್ರೌಂಡರ್..!

ಮಿಚೆಲ್‌ ಅಬ್ಬರ: ಕಿವೀಸ್‌ ಸ್ಫೋಟಕ ಆರಂಭ ಪಡೆಯಿತು. ಆ್ಯಲೆನ್‌ ಹಾಗೂ ಕಾನ್‌ವೇ 4.2 ಓವರಲ್ಲಿ 43 ರನ್‌ ಜೊತೆಯಾಟವಾಡಿದರು. ಕಾನ್‌ವೇ 52 ರನ್‌ ಗಳಿಸಿ ಔಟಾದ ಬಳಿಕ ಡ್ಯಾರೆಲ್‌ ಮಿಚೆಲ್‌ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 30 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್‌ನೊಂದಿಗೆ 59 ರನ್‌ ಸಿಡಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣರಾದರು.