* ಐಸಿಸಿ ನೂತನ ಟಿ20 ಬ್ಯಾಟರ್‌ಗಳ ಶ್ರೇಯಾಂಕ ಪ್ರಕಟ* ಬಾಬರ್ ಅಜಂ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟ ಸೂರ್ಯಕುಮಾರ್ ಯಾದವ್*  ನಂ.1 ಸ್ಥಾನದಲ್ಲೇ ಮುಂದುವರೆದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್

ದುಬೈ(ಸೆ.29): ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಐಸಿಸಿ ಪುರುಷರ ಟಿ20 ರ‍್ಯಾಂಕಿಂಗ್‌‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿರುವ ಸೂರ್ಯ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ವಿಕೆಟ್‌ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ ಅವರಿಗಿಂತ ಒಂದು ಸ್ಥಾನ ಹಿಂದಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಕೇವಲ 25 ಎಸೆತಗಳಲ್ಲಿ 46 ರನ್ ಸಿಡಿಸುವ ಮೂಲಕ ಬಾಬರ್ ಅಜಂ ಅವರನ್ನು ಹಿಂದೆ ತಳ್ಳಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು. ಆದರೆ ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಬಾಬರ್ ಅಜಂ ಸ್ಪೋಟಕ ಶತಕ ಸಿಡಿಸುವ ಮೂಲಕ ಮತ್ತೆ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು. ಇನ್ನು ಆಸೀಸ್‌ ಎದರಿನ ಎರಡನೇ ಟಿ20 ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಸೂರ್ಯ, ಮೂರನೇ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ಸ್ಪೋಟಕ ಅರ್ಧಶತಕ ಚಚ್ಚುವ ಮೂಲಕ ಮತ್ತೆ ಟಿ20 ರ‍್ಯಾಂಕಿಂಗ್‌‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಆಸ್ಟ್ರೇಲಿಯಾ ಎದುರಿನ ನಿರ್ಣಾಯಕ ಟಿ20 ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಚಚ್ಚಿದ್ದ ವಿರಾಟ್ ಕೊಹ್ಲಿ, ಒಂದು ಸ್ಥಾನ ಜಿಗಿತ ಕಂಡು 15ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಆಫ್ಘಾನಿಸ್ತಾನದ ರೆಹಮನುಲ್ಲಾ ಗುರ್ಬಾಜ್‌ 16ನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಚಚ್ಚಿದ್ದ ಕೆ ಎಲ್ ರಾಹುಲ್, ಆ ಬಳಿಕ ಉಳಿದೆರಡು ಟಿ20 ಪಂದ್ಯಗಳಲ್ಲಿ ಮಂಕಾಗಿದ್ದರು. ಹೀಗಾಗಿ ರಾಹುಲ್ 4 ಸ್ಥಾನ ಜಾರಿ 22ನೇ ಸ್ಥಾನ ತಲುಪಿದ್ದಾರೆ.

Ind vs Pak ಭಾರತ-ಪಾಕಿಸ್ತಾನ ಸರಣಿ ಆತಿಥ್ಯಕ್ಕೆ ಇಂಗ್ಲೆಂಡ್‌ ಆಫರ್‌! ನಯವಾಗಿ No ಎಂದ BCCI

ಸದ್ಯ 861 ರೇಟಿಂಗ್ ಅಂಕಗಳನ್ನು ಹೊಂದಿರುವ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನದಲ್ಲಿದ್ದರೆ, 801 ರೇಟಿಂಗ್ ಅಂಕ ಹೊಂದಿರುವ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಬಾಬರ್ ಅಜಂ ಹಾಗೂ ಏಯ್ಡನ್ ಮಾರ್ಕ್‌ರಮ್‌ ತಲಾ ಒಂದೊಂದು ಸ್ಥಾನ ಜಾರಿ ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಹೊರತುಪಡಿಸಿದ ಭಾರತದ ಯಾವೊಬ್ಬ ಬ್ಯಾಟರ್ ಕೂಡಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ.

ಇನ್ನು ಬೌಲರ್‌ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್‌ ಮೊದಲ ಸ್ಥಾನ ಪಡೆದಿದ್ದರೆ, ತಬ್ರೀಜ್‌ ಶಮ್ಸಿ, ಆದಿಲ್ ರಶೀದ್‌, ರಶೀದ್ ಖಾನ್ ಹಾಗೂ ವನಿಂದು ಹಸರಂಗ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾ ಅನುಭವಿ ವೇಗಿ ಒಂದು ಸ್ಥಾನ ಜಾರಿ 10ನೇ ಸ್ಥಾನಕ್ಕೆ ತಲುಪಿದ್ದು, ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ರ‍್ಯಾಂಕಿಂಗ್‌‌: 5ನೇ ಸ್ಥಾನಕ್ಕೇರಿದ ಹರ್ಮನ್‌

ದುಬೈ: ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮಂಗಳವಾರ ಪ್ರಕಟಗೊಂಡ ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ 4 ಸ್ಥಾನ ಏರಿಕೆ ಕಂಡು 5ನೇ ಸ್ಥಾನ ತಲುಪಿದ್ದಾರೆ. 2ನೇ ಏಕದಿನದಲ್ಲಿ ಕೌರ್‌ 143 ರನ್‌ ಸಿಡಿಸಿದ್ದರು. ಸ್ಮೃತಿ ಮಂಧನಾ ಒಂದು ಸ್ಥಾನ ಏರಿಕೆ ಕಂಡು 6ನೇ ಸ್ಥಾನ ಪಡೆದಿದ್ದಾರೆ.