Asianet Suvarna News Asianet Suvarna News

India Tour Of South Africa: ಪ್ರವಾಸಕ್ಕೆ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್ ಆಯ್ಕೆ ಖಚಿತ..?

* ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕಣ್ಣಿಟ್ಟಿರುವ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್

* ವಿಜಯ್ ಹಜಾರೆ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಉಭಯ ಆಟಗಾರರು

* ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿರುವ ಭಾರತ

Team India Cricketer Ruturaj Gaikwad and Venkatesh Iyer all set for South Africa ODIs kvn
Author
Bengaluru, First Published Dec 13, 2021, 7:00 AM IST

ನವದೆಹಲಿ(ಡಿ.13): ಇತ್ತೀಚೆಗಷ್ಟೇ ಭಾರತ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಆಲ್ರೌಂಡರ್‌ ವೆಂಕಟೇಶ್‌ ಅಯ್ಯರ್‌ (Venkatesh Iyer), ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವಿಜಯ್‌ ಹಜಾರೆ ಟೂರ್ನಿಯಲ್ಲಿ (Vijay Hazare Trophy) ಮಧ್ಯಪ್ರದೇಶ ಪರ ಆಡುತ್ತಿರುವ ವೆಂಕಟೇಶ್‌ 4 ದಿನಗಳಲ್ಲಿ 2ನೇ ಶತಕ ಸಿಡಿಸಿದ್ದಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಮಧ್ಯಪ್ರದೇಶ ಪರ ಆರಂಭಿಕನಾಗಿ ಆಡಿದ್ದ ವೆಂಕಟೇಶ್‌, ಇದೀಗ ಫಿನಿಶರ್ ಪಾತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮಹಾರಾಷ್ಟ್ರದ ಯುವ ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್ (Ruturaj Gaikwad) ಕೂಡಾ ಟೀಂ ಇಂಡಿಯಾ (Team India) ಆರಂಭಿಕ ಬ್ಯಾಟರ್‌ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ವಿಜಯ್ ಹಜಾರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಪರ 6ನೇ ಕ್ರಮಾಂಕದಲ್ಲಿ ಆಡಿದ್ದರು. ವೆಂಕಟೇಶ್‌ಗೆ ಟೀಂ ಇಂಡಿಯಾದ ಫಿನಿಶರ್‌ ಜವಾಬ್ದಾರಿ ನೀಡಲು ಬಿಸಿಸಿಐ (BCCI) ಆಯ್ಕೆ ಸಮಿತಿ ಎದುರು ನೋಡುತ್ತಿರುವ ಕಾರಣ, ಮಧ್ಯಪ್ರದೇಶ ಪರವೂ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಭಾನುವಾರ ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ ತಂಡ 56 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ವೆಂಕಿ ಅಯ್ಯರ್‌, 113 ಎಸೆತಗಳಲ್ಲಿ 8 ಬೌಂಡರಿ, 10 ಸಿಕ್ಸರ್‌ನೊಂದಿಗೆ 151 ರನ್‌ ಸಿಡಿಸಿದರು. ಬಳಿಕ 10 ಓವರ್‌ ಬೌಲ್‌ ಮಾಡಿ 2 ವಿಕೆಟ್‌ ಕಿತ್ತರು. ಕೇರಳ ವಿರುದ್ಧದ ಪಂದ್ಯದಲ್ಲಿ ಅವರು 84 ಎಸೆತಗಳಲ್ಲಿ 112 ರನ್‌ ಚಚ್ಚಿದ್ದರು. ಇನ್ನು ಉತ್ತರ ಖಂಡದ ವಿರುದ್ದ ವೆಂಕಟೇಶ್ ಅಯ್ಯರ್ ಕೇವಲ 49 ಎಸೆತಗಳಲ್ಲಿ 71 ರನ್‌ ಸಿಡಿಸಿದ್ದರು. ಅಯ್ಯರ್‌ ಬ್ಯಾಟಿಂಗ್‌ ನೆರವಿನಿಂದ ಮಧ್ಯ ಪ್ರದೇಶ ತಂಡವು 77 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.

ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ಟೀಂ ಇಂಡಿಯಾದಿಂದ ಹೊರದಬ್ಬುವತ್ತ ವೆಂಕಟೇಶ್ ಅಯ್ಯರ್ ದಿಢೀರ್ ಹೆಜ್ಜೆಯನ್ನಿಟ್ಟಿದ್ದಾರೆ. ಒಂದು ಕಡೆ ಫಿಟ್ನೆಸ್ ಹಾಗೂ ಫಾರ್ಮ್‌ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಅವರ ಸ್ಥಾನ ತುಂಬಲು ವೆಂಕಟೇಶ್ ಅಯ್ಯರ್ ಸಜ್ಜಾಗಿದ್ದಾರೆ. 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯ ಯುಎಇ ಚರಣದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ವೆಂಕಟೇಶ್ ಅಯ್ಯರ್ ಅಮೋಘ ಆಲ್ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆದು ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು. ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ಕೆ.ಎಲ್. ರಾಹುಲ್ (KL Rahul) ಇನಿಂಗ್ಸ್ ಆರಂಭಿಸುವುದರಿಂದ ವೆಂಕಟೇಶ್ ಅಯ್ಯರ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ವೆಂಕಟೇಶ್ ಅಯ್ಯರ್ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಇನ್ನೂ ಫಿಟ್ನೆಸ್‌ ಕಾಯ್ದುಕೊಳ್ಳದ ಬೆನ್ನಲ್ಲೇ ಅಯ್ಯರ್ 9ರಿಂದ 10  ಓವರ್‌ ಬೌಲಿಂಗ್ ಮಾಡುತ್ತಿದ್ದಾರೆ. ವೆಂಕಟೇಶ್ ಅಯ್ಯರ್‌ಗೆ ದೊಡ್ಡ ವೇದಿಯಲ್ಲಿ ಅವಕಾಶ ನೀಡುವ ಸಮಯ ಬಂದಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ ಎಂದು ವರದಿಯಾಗಿದೆ.

Rohit Sharma: ಸಾವಿರ ಸಾರಿ ಹೇಳಿದ್ದೀನಿ, ಜನ ಏನ್ ಹೇಳ್ತಾರೆ ಅನ್ನೋದು ನನಗೆ ಲೆಕ್ಕಕ್ಕಿಲ್ಲ!

ಇನ್ನು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ (Orange Cap) ಮುಡಿಗೇರಿಸಿಕೊಂಡಿದ್ದ ಋತುರಾಜ್ ಗಾಯಕ್ವಾಡ್‌  ವಿಜಯ್ ಹಜಾರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದು, ಶಿಖರ್ ಧವನ್ (Shikhar Dhawan) ಅವರನ್ನು ಹೊರದಬ್ಬಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. ಒಂದು ಕಡೆ ಗಾಯಕ್ವಾಡ್ ಹ್ಯಾಟ್ರಿಕ್ ಸೆಂಚುರಿ (136, 154, 124) ಬಾರಿಸಿದ್ದರೇ ಮತ್ತೊಂದೆಡೆ ಶಿಖರ್ ಧವನ್‌ 0, 12, 14 ಹಾಗೂ 18 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಯಾವ ಆಟಗಾರನಿಗೆ ಮಣೆಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ತಂಡವು ಆಫ್ರಿಕಾ ಪ್ರವಾಸದಲ್ಲಿ (India Tour of South Africa) ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪೈಕಿ ಟೆಸ್ಟ್‌ ಪಂದ್ಯಗಳ ಸರಣಿಯು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

Follow Us:
Download App:
  • android
  • ios