ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಹೀಗಾಗಿ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಡಿ.24): ಡಿಸೆಂಬರ್ 26 ರಿಂದ ಇಲ್ಲಿ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ಗೆ ಪೂರ್ವಭಾವಿಯಾಗಿ ಭಾರತ ತಂಡ ಬುಧವಾರದಿಂದಲೇ ಅಭ್ಯಾಸ ಶುರು ಮಾಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಪ್ರೇಲಿಯಾ ಎದುರು ಹೀನಾಯವಾಗಿ ಸೋಲುಂಡು 4 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಹಿನ್ನಡೆ ಅನುಭವಿಸಿರುವ ಭಾರತ, ಉಳಿದ 3 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸರಣಿ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ.
ಗಾಯಗೊಂಡು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಚೇತರಿಸಿಕೊಂಡಿದ್ದು, ನೆಟ್ಸ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಹಾಗೂ ಜಡೇಜಾ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಈ ಮೂಲಕ ಆಸೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಈ ಇಬ್ಬರು ಆಟಗಾರರು ಭಾರತದ ಅಂತಿಮ 11ರಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆ ದಟ್ಟವಾಗಿದೆ. ಜಡೇಜಾ, ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದು ತಂಡದ ಆಡಳಿತಕ್ಕೆ ಹೊಸ ಭರವಸೆ ಮೂಡಿಸಿದೆ.
ಭಾರತಕ್ಕೆ ಮರಳುವ ಮುನ್ನ ತಂಡಕ್ಕೆ ಸ್ಪೂರ್ತಿ ತುಂಬಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಪಿತೃತ್ವ ರಜೆಯಲ್ಲಿ ಭಾರತಕ್ಕೆ ವಾಪಸಾಗಿದ್ದರೆ, ವೇಗಿ ಮೊಹಮದ್ ಶಮಿ ಮೊಣಕೈಗೆ ಗಾಯ ಮಾಡಿಕೊಂಡು ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಕೆಲ ಬ್ಯಾಟ್ಸ್‌ಮನ್‌ಗಳನ್ನು ಕೈ ಬಿಟ್ಟು ಇತರೆ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುವ ಯೋಚನೆಯಲ್ಲಿ ತಂಡದ ಆಡಳಿತವಿದೆ. ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಎರಡು ಇನ್ನಿಂಗ್ಸ್‌ಗಳಲ್ಲಿ ಕಳಪೆ ಆಟವಾಡಿದ್ದರು. ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಶಾ ಬದಲು ಶುಭ್‌ಮನ್ ಗಿಲ್ ಆಡುವ ಸಾಧ್ಯತೆ ಹೆಚ್ಚಿದೆ.
ಗಾಯಗೊಂಡಿದ್ದ ಜಡೇಜಾ, ಬುಧವಾರ 1 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಈ ಮೂಲಕ ಜಡೇಜಾ ಫಿಟ್ ಇರುವುದನ್ನು ಸಾಬೀತುಪಡಿಸಿದ್ದಾರೆ. ಪೃಥ್ವಿ ಶಾ ಕೂಡ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರ ಜೊತೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.
ಮೊಹಮದ್ ಶಮಿ ಬದಲು ಅಂತಿಮ 11ರಲ್ಲಿ ಮೊಹಮದ್ ಸಿರಾಜ್ ಅಥವಾ ನವದೀಪ್ ಸೈನಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಇಬ್ಬರು ಬೌಲರ್‌ಗಳು ನೆಟ್ಸ್‌ನಲ್ಲಿ ದೀರ್ಘಾವಧಿ ಅಭ್ಯಾಸ ನಿರತರಾಗಿದ್ದರು. ವಿಕೆಟ್ ಕೀಪರ್ ಸಾಹಾ ಬದಲಿಗೆ ರಿಷಭ್ ಪಂತ್ ಸ್ಥಾನ ಪಡೆಯುವ ಸಾಧ್ಯತೆಯಿದೆ.
