"Forever Crush" ಜತೆಗಿನ ಫೋಟೋ ಹಂಚಿಕೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ..! ಇದು ಪತ್ನಿ ಫೋಟೋವಲ್ಲ
ಬಿಡುವಿನ ಸಮಯ ಎಂಜಾಯ್ ಮಾಡುತ್ತಿರುವ ರವೀಂದ್ರ ಜಡೇಜಾ
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಜಡೇಜಾ ಹಂಚಿಕೊಂಡ ಫೋಟೋ ವೈರಲ್
Forever Crush ಫೋಟೋ ಹಂಚಿಕೊಂಡ ಜಡೇಜಾ
ನವದೆಹಲಿ(ಜೂ.19): ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ, ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 34 ವರ್ಷದ ತಾರಾ ಆಲ್ರೌಂಡರ್ ಜಡೇಜಾ, ಕಳೆದೊಂದು ದಶಕದಿಂದ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ತಮ್ಮ ಆಲ್ರೌಂಡ್ ಕೌಶಲ್ಯದ ಮೂಲಕ ಏಕಾಂಗಿಯಾಗಿ ಹಲವು ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ತಮ್ಮ ಅದ್ಭುತ ಆಲ್ರೌಂಡ್ ಆಡದ ಮೂಲಕ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜತೆ ಜಂಟಿ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.
ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ, ಕ್ರಿಕೆಟ್ ಎಂಜಾಯ್ ಮಾಡಿದಷ್ಟೇ ಕ್ರಿಕೆಟ್ ಮೈದಾನದಾಚೆಗೆ ತಮ್ಮ ನೆಚ್ಚಿನ ಕುದುರೆಗಳ ಒಡನಾಟವನ್ನು ಮತ್ತಷ್ಟು ಎಂಜಾಯ್ ಮಾಡುತ್ತಾ ಬಂದಿದ್ದಾರೆ. ಈ ಹಿಂದೆಯೂ ಜಡೇಜಾ, ತಮ್ಮ ನೆಚ್ಚಿನ ಕುದುರೆಗಳ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಖುಷಿಪಡುತ್ತಾ ಬಂದಿದ್ದಾರೆ. ಇದೀಗ ಜಡ್ಡು ತಮ್ಮ ನೆಚ್ಚಿನ ಕುದುರೆಯ ಫೋಟೋವನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದು, ಆ ಫೋಟೋಗಳು ಜಡ್ಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ಕೆಂಪು ಬಣ್ಣದ ಟೀ- ಶರ್ಟ್ ತೊಟ್ಟು, ತಮ್ಮ ಕುದುರೆಯ ಜತೆ ರವೀಂದ್ರ ಜಡೇಜಾ ಫೋಟೋ ಹಂಚಿಕೊಂಡಿದ್ದು, ಅದಕ್ಕೆ "ಫಾರ್‌ಎವರ್ ಕ್ರಶ್" ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಇನ್ನು ಇದರ ಜತೆಗೆ #meetingafterlongtime (ತುಂಬಾ ಸಮಯದ ಬಳಿಕ ಭೇಟಿ) ಎನ್ನುವ ಹ್ಯಾಶ್‌ಟ್ಯಾಗ್ ನೀಡಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೂ ರವೀಂದ್ರ ಜಡೇಜಾ, ತಮ್ಮ ನೆಚ್ಚಿನ ಕುದುರೆ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಆಗ "ನನ್ನ ಕ್ರಶ್" ಎನ್ನುವ ಕ್ಯಾಪ್ಶನ್ ನೀಡಿದ್ದರು.
'ಪಾಕಿಸ್ತಾನ ಕ್ರಿಕೆಟ್ ಉತ್ಕೃಷ್ಟವಾಗಿದೆ, ಭಾರತ ಬೇಕಿದ್ದರೇ ನರಕಕ್ಕೆ ಹೋಗಲಿ': ಜಾವೇದ್ ಮಿಯಾಂದಾದ್..!
ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ, ಇತ್ತೀಚೆಗಷ್ಟೇ ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ 209 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇನ್ನು ಇದರ ಹೊರತಾಗಿಯೂ ಜಡೇಜಾ, ಭಾರತದ ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದರು.
ಫೈನಲ್‌ನಲ್ಲಿ 4 ವಿಕೆಟ್ ಕಿತ್ತ ರವೀಂದ್ರ ಜಡೇಜಾ ಟೆಸ್ಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಅವರು 65 ಪಂದ್ಯಗಳಲ್ಲಿ 268 ವಿಕೆಟ್ ಕಬಳಿಸಿದ್ದು, ಬಿಶನ್ ಸಿಂಗ್ ಬೇಡಿ ಅವರ 266 ವಿಕೆಟ್‌ಗಳ ದಾಖಲೆ ಮುರಿದರು. ಅಲ್ಲದೇ ಹೆಚ್ಚು ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ಗಳ ಪೈಕಿ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 433 ವಿಕೆಟ್ ಪಡೆದಿರುವ ಶ್ರೀಲಂಕಾದ ಹೆರಾತ್‌ಗೆ ಮೊದಲ, ನ್ಯೂಜಿಲೆಂಡ್ನ ವೆಟ್ಟೋರಿ(362), ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್(297)ಗೆ ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದಾರೆ.
ಐರ್ಲೆಂಡ್ ಟಿ20 ಸರಣಿ: ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ?
ಇನ್ನು 2023ರಲ್ಲಿ ರವೀಂದ್ರ ಜಡೇಜಾ ಅದ್ಬುತ ಲಯವನ್ನು ಹೊಂದಿದ್ದಾರೆ. ಈ ವರ್ಷ ಜಡೇಜಾ, ಐದು ಟೆಸ್ಟ್ ಪಂದ್ಯಗಳನ್ನಾಡಿ ಒಂದು ಅರ್ಧಶತಕ ಸಹಿತ 30.50 ಬ್ಯಾಟಿಂಗ್ ಸರಾಸರಿಯಲ್ಲಿ 183 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ಜಡ್ಡು 25 ಬಲಿ ಪಡೆದಿದ್ದಾರೆ. ಜಡೇಜಾ ಭಾರತದ ತಾರಾ ಆಲ್ರೌಂಡರ್ ಆಗಿದ್ದು, ಮುಂಬರುವ ಏಷ್ಯಾಕಪ್ ಹಾಗೂ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಆದರೆ ಇದುವರೆಗೂ ಐಸಿಸಿ ಅಧಿಕೃತವಾಗಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿಲ್ಲ.