Border Gavaskar Trophy: ಮದುವೆ ಬೆನ್ನಲ್ಲೇ ಅಭ್ಯಾಸ ಆರಂಭಿಸಿದ ಕೆ ಎಲ್ ರಾಹುಲ್..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಫೆಬ್ರವರಿ 09ರಿಂದ ಆರಂಭ
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದ ಕೆ ಎಲ್ ರಾಹುಲ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳೊಳಗಾಗಿ ನೆಟ್ಸ್‌ನಲ್ಲಿ ರಾಹುಲ್ ಅಭ್ಯಾಸ
ಮುಂಬೈ(ಜ.31): ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ಕೆ ಎಲ್ ರಾಹುಲ್, ಕೆಲದಿನಗಳ ಹಿಂದಷ್ಟೇ ಆತಿಯಾ ಶೆಟ್ಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಾಗಿ ಕೆಲವೇ ದಿನಗಳೊಳಗೆ ಮುಂಬೈನ ಮೈದಾನದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅಭ್ಯಾಸ ಆರಂಭಿಸಿದ್ದಾರೆ.
ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಮುಂಬರುವ ಫೆಬ್ರವರಿ 09ರಿಂದ ಆರಂಭವಾಗಲಿದ್ದು, ಕೆ ಎಲ್ ರಾಹುಲ್, ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಪಾಲಿಗೆ ಆಸ್ಟ್ರೇಲಿಯಾ ಎದುರು ನಡೆಯಲಿರುವ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಸಾಕಷ್ಟು ಮಹತ್ವದ್ದೆನಿಸಿದ್ದು, ಈ ಸರಣಿ ಗೆಲುವು, ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ.
ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಸ್ಟ್ರೇಲಿಯಾ ತಂಡವು ಬಹುತೇಕ ಈಗಾಗಲೇ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಗೆಲುವು ಸಾಧಿಸಿದರೇ, ಫೈನಲ್‌ಗೆ ಅನಾಯಾಸವಾಗಿ ಲಗ್ಗೆಯಿಡಲಿದೆ. ಹೀಗಾಗಿ ತವರಿನಲ್ಲಿ ನಡೆಯಲಿರುವ ಈ ಟೆಸ್ಟ್ ಸರಣಿಯು ಭಾರತ ಕ್ರಿಕೆಟ್ ತಂಡದ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಲಿದೆ.
ಇದೀಗ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಬಾಂಧ್ರಾದಲ್ಲಿನ ನೆಟ್ಸ್‌ವೊಂದರಲ್ಲಿ ಕೆ ಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಕೆ ಎಲ್ ರಾಹುಲ್ ಪಾಲಿಗೂ ಕೂಡಾ ಮಾಡು ಇಲ್ಲವೇ ಮಡಿ ಸರಣಿ ಎನಿಸಿಕೊಂಡಿದೆ.
ಕೆ ಎಲ್ ರಾಹುಲ್ ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಪದೇ ಪದೇ ವಿಫಲವಾಗುತ್ತಲೇ ಬಂದಿದ್ದಾರೆ. ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಕೆ ಎಲ್ ರಾಹುಲ್, ಫಾರ್ಮ್‌ಗೆ ಮರಳಲು ಮತ್ತೊಂದು ಅವಕಾಶ ಸಿಕ್ಕಂತೆ ಆಗಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುತ್ತಿರುವ ಕೆ ಎಲ್ ರಾಹುಲ್, ಸ್ಥಿರ ಪ್ರದರ್ಶನ ತೋರದೇ ಇರುವುದು ಟೀಂ ಮ್ಯಾನೇಜ್‌ಮೆಂಟ್ ಪಾಲಿಗೆ ದೊಡ್ಡ ತಲೆನೋವು ಎನಿಸಿಕೊಂಡಿದೆ. ಇದೀಗ ಬಲಿಷ್ಠ ಆಸ್ಟ್ರೇಲಿಯಾ ಎದುರು ರಾಹುಲ್ ಮೈ ಚಳಿ ಬಿಟ್ಟು ಬ್ಯಾಟ್ ಬೀಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಆಸೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಪ್ಯಾಟ್ ಕಮಿನ್ಸ್(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:
ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್