ಮಾರ್ಚ್‌ ತಿಂಗಳಿನಲ್ಲಿ ತೋರಿದ ಅದ್ಭುತ ಪ್ರದರ್ಶನಕ್ಕಾಗಿ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಹಾಗೂ ದಕ್ಷಿಣ ಆಫ್ರಿಕಾದ ಮಹಿಳಾ ಆಟಗಾರ್ತಿ ಲಿಜಿಲಿ ಲೀ ಐಸಿಸಿ ತಿಂಗಳ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಏ.13): ಐಸಿಸಿ ನೂತನವಾಗಿ ಪರಿಚಯಿಸಿದ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ದಿನಕಳೆದಂತೆ ಜನಪ್ರಿಯವಾಗುತ್ತಿದ್ದು, ಮಾರ್ಚ್‌ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಭಾಜನರಾಗಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಲಿಜೆಲಿ ಲೀ ತಿಂಗಳ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಒಂದು ವರ್ಷಗಳ ಕಾಲ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಭುವನೇಶ್ವರ್, ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್‌ ಮಾಡಿದ್ದರು. ಮೀರತ್ ಮೂಲದ ಬಲಗೈ ವೇಗಿ ಭುವನೇಶ್ವರ್‌ ಕುಮಾರ್‌, ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಯಲ್ಲಿ 6 ವಿಕೆಟ್‌ ಹಾಗೂ ಟಿ20 ಸರಣಿಯಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿನ ಪ್ರದರ್ಶನ ತೋರಿದ್ದರು.

ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ರೇಸಲ್ಲಿ ಭುವನೇಶ್ವರ್‌ ಕುಮಾರ್

Scroll to load tweet…

ತಿಂಗಳ ಶ್ರೇಷ್ಠ ಪ್ರಶಸ್ತಿಯಲ್ಲಿ ಭಾರತೀಯರದ್ದೇ ಮೇಲುಗೈ: ಹೌದು, ಐಸಿಸಿ ಪರಿಚಯಿಸಿದ ತಿಂಗಳ ಶ್ರೇಷ್ಠ ಪ್ರಶಸ್ತಿ ಪಡೆದವರಲ್ಲಿ ಭಾರತೀಯ ಕ್ರಿಕೆಟಿಗರದ್ದೇ ಮೇಲುಗೈ ಎನಿಸಿದೆ. ಜನವರಿ ತಿಂಗಳಿನಲ್ಲಿ ರಿಷಭ್‌ ಪಂತ್‌, ಫೆಬ್ರವರಿ ತಿಂಗಳಿನಲ್ಲಿ ರವಿಚಂದ್ರನ್‌ ಅಶ್ವಿನ್‌ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಭುವಿ ತಿಂಗಳ ಪ್ರಶಸ್ತಿಗೆ ಭಾಜನರಾಗುವ ಮೂಲಕ ಸತತ 3ನೇ ಸಲವು ಐಸಿಸಿ ತಿಂಗಳ ಪ್ರಶಸ್ತಿ ಭಾರತೀಯರ ಪಾಲಾಗಿದೆ.

Scroll to load tweet…

ಇನ್ನು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಆಟಗಾರ್ತಿ ಲಿಜೆಲಿ ಲೀ ಭಾರತ ಪ್ರವಾಸದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಏಕದಿನ ಕ್ರಿಕೆಟ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದರು. ಭಾರತ ವಿರುದ್ದದ 4 ಪಂದ್ಯಗಳ ಏಕದಿನ ಸರಣಿಯಲ್ಲಿ ಲೀ ಒಂದು ಶತಕ ಹಾಗೂ 2 ಅರ್ಧಶತಕ ಬಾರಿಸುವ ಮೂಲಕ ಮಾರ್ಚ್‌ ತಿಂಗಳ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.