ನವದೆಹಲಿ(ಡಿ.24): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದು, ನಾನಾ ಕಾರಣಗಳಿಂದ ಈ ಸರಣಿ ಮಹತ್ವವನ್ನು ಪಡೆದುಕೊಂಡಿದೆ.

ಈಗಾಗಲೇ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ. ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದಾರೆ. ಗಾಯದ ಸಮಸ್ಯೆ ಕೂಡಾ ಟೀಂ ಇಂಡಿಯಾವನ್ನು ಬಾಧಿಸುತ್ತಿದ್ದು, ಪ್ರಮುಖ ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಅಲಭ್ಯತೆ ತಂಡವನ್ನು ಬಿಟ್ಟೂಬಿಡದಂತೆ ಕಾಡುತ್ತಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿ ತಂಡವನ್ನು ಕಾಡಲಿದ್ದು, ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ 150 ರನ್‌ಗಳಿಗೆ ಆಲೌಟ್ ಆದರು ಅಚ್ಚರಿಪಡುವಂತಿಲ್ಲ ಎಂದು ಕ್ರಿಕ್‌ಟ್ರ್ಯಾಕರ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನಕ್ಕೆ ಕೆ.ಎಲ್. ರಾಹುಲ್ ಬದಲು ಯುವ ಪ್ರತಿಭೆ ಶುಭ್‌ಮನ್‌ ಗಿಲ್‌ಗೆ ತಂಡದಲ್ಲಿ ಅವಕಾಶ ನೀಡಬೇಕು ಎಂದು ಪನೇಸರ್ ಹೇಳಿದ್ದಾರೆ. ಇನ್ನು ಆರನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಸೂಕ್ತ ಆಯ್ಕೆ ಎಂದು ಮಾಂಟಿ ಹೇಳಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ಗೆ ಜಡೇಜಾ, ಗಿಲ್ ಕಠಿಣ ಅಭ್ಯಾಸ

ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ನಾಟಕೀಯ ಬ್ಯಾಟಿಂಗ್ ಕುಸಿತ ಕಾಣುವ ಮೂಲಕ ಕೇವಲ ಮೂರೇ ದಿನಕ್ಕೆ ಟೆಸ್ಟ್‌ ಪಂದ್ಯ ಅಂತ್ಯವಾಗಿತ್ತು. ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26ರಿಂದ ಆರಂಭವಾಗಲಿದ್ದು, ಆತಿಥೇಯ ಆಸ್ಟ್ರೇಲಿಯಾಗೆ ತಿರುಗೇಟು ನೀಡಲು ಟೀಂ ಇಂಡಿಯಾ ಎದುರು ನೋಡುತ್ತಿದೆ.