ಬೆಂಗಳೂರು[ಡಿ.07]: ಬಹಳ ದಿನಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ಗೆ ಕಮ್’ಬ್ಯಾಕ್ ಮಾಡಿರುವ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿಯಾಗಿಯೇ ಅಭಿಯಾನ ಆರಂಭಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅಜೇಯ 94 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲ ಟಿ20 ಪಂದ್ಯದಲ್ಲಿ ಹೊಸ ದಾಖಲೆ ಬರೆದ ಕೊಹ್ಲಿ..!

ಹೌದು, ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 207 ರನ್’ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಕಠಿಣ ಗುರಿ ಬೆನ್ನತ್ತಿದ ಭಾರತ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಚೆಂಡನ್ನು ನಾನಾ ಮೂಲೆಗಟ್ಟುವ ಮೂಲಕ ಭರ್ಜರಿ ಮನರಂಜೆ ನೀಡಿದರು. 50 ಎಸೆತಗಳನ್ನು ಎದುರಿಸಿದ ವಿರಾಟ್ ತಲಾ 6 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 94 ರನ್ ಚಚ್ಚಿದರು. ವಿರಾಟ್ ಬ್ಯಾಟಿಂಗ್ ನೋಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಸರ್. ವೀವ್ ರಿಚರ್ಡ್ಸ್ ’ಅಮೇಜಿಂಗ್, ಜಸ್ಟ್ ಅಮೇಜಿಂಗ್’ ಎಂದು ಉದ್ಘರಿಸಿದ್ದಾರೆ.

ವೀವ್ ರಿಚರ್ಡ್ಸ್ ಟ್ವೀಟ್ ನೋಡಿದ ಕೊಹ್ಲಿ, ಥ್ಯಾಂಕ್ಸ್ ಬಿಗ್ ಬಾಸ್. ನೀವೇ ಹೀಗೆ ಹೇಳಿದ್ದೀರಾ ಅಂದರೆ ಅದಕ್ಕಿಂತ ಇನ್ನೇನು ಬೇಕು ಎಂದು ಮರು ಟ್ವೀಟ್ ಮಾಡಿದ್ದಾರೆ.