ನವದೆಹಲಿ(ಮೇ.22): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲ್ಯದ ಕೋಚ್‌ ಡೆಲ್ಲಿ ಮೂಲದ ಸುರೇಶ್ ಭಾತ್ರಾ(53) ಕೊನೆಯುಸಿರೆಳೆದಿದ್ದಾರೆ. ವಿರಾಟ್ ಕೊಹ್ಲಿ ಬಾಲ್ಯದ ಕೋಚ್‌ ರಾಜ್‌ಕುಮಾರ್ ಶರ್ಮಾ ಅವರ ಸಹಾಯಕ ಕೋಚ್ ಆಗಿ ಸುರೇಶ್ ಭಾತ್ರಾ ಕಾರ್ಯನಿರ್ವಹಿಸುತ್ತಿದ್ದರು.

ಖ್ಯಾತ ಕ್ರೀಡಾ ಪತ್ರಕರ್ತ ವಿಜಯ್ ಲೋಕಪಲ್ಲೇ ವಿರಾಟ್ ಕೊಹ್ಲಿ ಬಾಲ್ಯದ ಕೋಚ್‌ ಸುರೇಶ್ ಕೊನೆಯುಸಿರೆಳೆದ ವಿಚಾರವನ್ನು ಖಚಿತಪಡಿಸಿದ್ದಾರೆ. 

ಬಾಲ್ಯದಲ್ಲಿ ವಿರಾಟ್ ಕೊಹ್ಲಿಗೆ ಕೋಚ್‌ ಅಗಿ ಕಾರ್ಯನಿರ್ವಹಿಸಿದ್ದ ಸುರೇಶ್ ಭಾತ್ರಾ(ಸ್ಟ್ರೈಪ್ ಟಿ ಶರ್ಟ್‌ ತೊಟ್ಟಿರುವ) ಗುರುವಾರ ಕೊನೆಯುಸಿರೆಳೆದಿದ್ದಾರೆ. ಅವರು ಎಂದಿನಂತೆ ಬೆಳಗಿನ ಪೂಜಾ ಕಾರ್ಯಗಳನ್ನು ಮುಗಿಸಿದ ಬಳಿಕ ಕುಸಿದು ಬಿದ್ದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ನಾನು ನನ್ನ ಕಿರಿಯ ಸಹೋದರನನ್ನು ಕಳೆದುಕೊಂಡೆ, ಆತ 1985ರಿಂದಲೂ ನನಗೆ ಪರಿಚಿತನಾಗಿದ್ದ ಎಂದು ವಿರಾಟ್ ಕೊಹ್ಲಿ ಕೋಚ್ ರಾಜ್‌ಕುಮಾರ್ ಶರ್ಮಾ ತಿಳಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. 

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂದೆ ಇನ್ನಿಲ್ಲ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ಬ್ಯಾಟ್ಸ್‌ಮನ್ ಆಗಿ ಬೆಳೆಯುವಲ್ಲಿ ಕೋಚ್‌ಗಳ ಪಾತ್ರ ಮಹತ್ವದ್ದಾಗಿದೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ವಿರಾಟ್ ಕೊಹ್ಲಿ ಭಾರತ ಪರ ಇದುವರೆಗೂ 91 ಟೆಸ್ಟ್, 254 ಏಕದಿನ ಹಾಗೂ 90 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 7490, ಏಕದಿನ ಕ್ರಿಕೆಟ್‌ನಲ್ಲಿ 12,169 ಹಾಗೂ ಟಿ20 ಕ್ರಿಕೆಟ್‌ನಲ್ಲಿ 3,159 ರನ್ ಬಾರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ವಿರಾಟ್ ಬಾರಿಸಿದ್ದಾರೆ.