ಸಿಡ್ನಿ(ನ.15): ಬೆಳಕಿನ ಹಬ್ಬ ದೀಪಾವಳಿಗೆ ಶುಭಕೋರುವ ವೇಳೆ ಪಟಾಕಿ ಹೊಡೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನೆಟ್ಟಿಗರು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಸದ್ಯ ಆಸ್ಟ್ರೇಲಿಯಾದಲ್ಲಿದ್ದು, ಸಿಡ್ನಿಯಲ್ಲಿ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ನವೆಂಬರ್ 14ರಂದು ದೇಶದ ಜನತೆಗೆ  ದೀಪಾವಳಿ ಹಬ್ಬಕ್ಕೆ ಶುಭ ಕೋರುವ ಸಂದರ್ಭದಲ್ಲಿ ಪರಿಸರ ಕಾಳಜಿಯಿಂದ ಈ ಸಲ ಪಟಾಕಿ ಹೊಡೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದರು.  ಆದರೆ ಇದು ಕೆಲವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಅಷ್ಟಕ್ಕೂ ಟ್ವೀಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು..?

ನನ್ನ ಕಡೆಯಿಂದ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು. ದೇವರು ಸುಖ-ಸಂತೋಷ ಹಾಗೂ ಸಮೃದ್ಧಿಯನ್ನು ಈ ದೀಪಾವಳಿಯಲ್ಲಿ ಕರುಣಿಸಲಿ. ನೆನಪಿಡಿ ಯಾರೂ ಪಟಾಕಿ ಹೊಡೆಯಬೇಡಿ. ನಮ್ಮ ಪರಿಸರವನ್ನು ಕಾಪಾಡೋಣ. ಈ ಶುಭ ಸಂದರ್ಭದಲ್ಲಿ ಸರಳವಾಗಿ ದೀಪಗಳನ್ನು ಹಚ್ಚಿ ನಮ್ಮ ಪ್ರೀತಿ ಪಾತ್ರರೊಂದಿಗೆ ಸಿಹಿ ತಿಂದು ಸಂತೋಷದಿಂದಿರಿ ಎಂದು ಟ್ವೀಟ್ ಮೂಲಕ ಕೊಹ್ಲಿ ವಿಡಿಯೋ ಸಂದೇಶ ಕಳಿಸಿದ್ದರು.

ಸಮಸ್ತ ಭಾರತೀಯರಿಗೆ ದೀಪಾವಳಿ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ!

ಕೊಹ್ಲಿಯ ಈ ಟ್ವೀಟ್‌ನಲ್ಲಿ ಪಟಾಕಿ ಹೊಡೆಯಬೇಡಿ ಎಂದಿರುವುದು ಕೆಲವರ ಆಕ್ರೋಶಕ್ಕೆ ಗುರಿಯಾಗಿದೆ. ಇಂತಹ ತಪ್ಪನ್ನು ಮತ್ತೊಮ್ಮೆ ಮಾಡಬೇಡಿ. ಇಂತಹ ಉಪದೇಶ ಮಾಡಬೇಡಿ ಎಂದು ಓರ್ವ ನೆಟ್ಟಿಗ ಕಿಡಿಕಾರಿದ್ದರೆ, ಚಾರ್ಟೆಡ್‌ ವಿಮಾನದಲ್ಲಿ ಓಡಾಡುವ, ನೂರಾರು ಇಂಧನ ಕಾರನ್ನು ಹೊಂದಿರುವ, ಮನೆತುಂಬ ಏಸಿ ಹಾಕಿಸಿಕೊಂಡಿರುವಾತ ಸಿಂಪಲ್‌ ಆಗಿ ದೀಪಾವಳಿ ಮಾಡಿ ಎನ್ನುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.